ಬೆಂಗಳೂರಿನ ವೈದ್ಯರಲ್ಲಿ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ್ದ ಸೊಸೆಯನ್ನು ಸಂಜಯ್ ನಗರದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಹಿಳೆ ಮೂಲತ: ಕೊಳ್ಳೇ ಗಾಲದವರು ಎನ್ನಲಾಗಿದ್ದು, ಪತಿಯೊಂದಿಗೆ ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿ ವಾಸವಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗುವಿದ್ದು, ಪತಿ ಕ್ಯಾಬ್ ಚಾಲಕ.
ವೈದ್ಯರಿಗೆ ಮಾತ್ರೆ ಕೇಳಿದ್ದ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಅತ್ತೆ ಹಾಗೂ ಮಹಿಳೆ ನಡುವೆ ಯಾವುದೇ ಗಲಾಟೆ ಇರಲಿಲ್ಲ. ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತಾನೇ ಸಾಯಲು ಮಾತ್ರೆ ಕೇಳಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಗೂಗಲ್‌ನಲ್ಲಿ ಸರ್ಚ್ ಮಾಡಿ ಮಹಿಳೆ ಡಾಕ್ಟರ್ ನಂಬರ್ ಪಡೆದಿದ್ದರು. ಖುದ್ದು ಡಾಕ್ಟರ್ ಮುಂದೆಯೇ ಸಂಜಯ್ ನಗರ ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡಿದ್ದು, ಮಹಿಳೆಗೆ ಕೌನ್ಸೆಲಿಂಗ್ ನೀಡಲು ನಿರ್ಧರಿಸಲಾಗಿದೆ.
ಡಾಕ್ಟರ್ ಸುನೀಲ್ ಕುಮಾರ್ ಅವರನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದ ಮಹಿಳೆ, ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು, ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದರು.
ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿ ಹೇಳುತ್ತಿದ್ದಂತೆ ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದರು. ಮುಂಚೆಯೇ ಸ್ಕ್ರೀನ್‌ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ ತನಿಖೆಗೆ ಮನವಿ ಮಾಡಿದ್ದರು.