Menu

ಮಾನವರಹಿತ ಗಗನಯಾನ ಮಿಷನ್‌ನ ಕ್ರ್ಯೂ ಮಾಡ್ಯೂಲ್‌ ಬಾಹ್ಯಾಕಾಶ ಕೇಂದ್ರಕ್ಕೆ ರವಾನೆ

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮಾನವರಹಿತ ಗಗನಯಾನ ಮಿಷನ್‌ನ ಕ್ರ್ಯೂ (ಸಿಬ್ಬಂದಿ) ಮಾಡ್ಯೂಲ್‌ ಅನ್ನು ಬೆಂಗಳೂರು ಎಲ್‌ಪಿಎಸ್‌ನಿಂದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಇಸ್ರೋ, ಲಿಕ್ವಿಡ್‌ ಪ್ರೊಪಲ್ಷನ್ ಸಿಸ್ಟಮ್‌ ಏಕೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಮೊದಲ ಸಿಬ್ಬಂದಿರಹಿತ ಗಗನಯಾನ ಯೋಜನೆಯ ಭಾಗವಾಗಿ ಇದನ್ನು ಕಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾದ ಕ್ರ್ಯೂ ಮಾಡ್ಯೂಲ್‌ ಎಂತಹ ಪರಿಸ್ಥಿತಿಯಲ್ಲೂ ನೇರವಾಗಿ, ಸ್ಥಿರವಾಗಿರುವಂತೆ ನೋಡಿಕೊಳ್ಳುವ ಸಿಎಂಯುಎಸ್‌ ಅನ್ನೂ ಮಾಡ್ಯೂಲ್‌ಗೆ ಜೋಡಿಸಲಾಗಿದೆ.  ಫೆಬ್ರವರಿಯಲ್ಲಿ ಇದರ ಪರೀಕ್ಷೆ ನಡೆಯಲಿದೆ. ಗಗನಯಾನವು ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಯೋಜನೆಯಾದರೂ ಮೊದಲಿಗೆ ಪ್ರಾಯೋಗಿಕವಾಗಿ ಮನುಷ್ಯರ ಜಾಗದಲ್ಲಿ ಮಾನವಾಕೃತಿಗಳನ್ನಿರಿಸಿ ಕಳಿಸಲಾಗುವುದು. ಇದು ಯಶಸ್ವಿಯಾದರೆ ನಂತರ ಗಗನಯಾತ್ರಿಗಳನ್ನು ಕರೆದೊಯ್ಯಲಾಗುವುದು ಎಂದು ಇಸ್ರೋ ತಿಳಿಸಿದೆ.

ಅಮೆರಿಕದ ಸ್ಪೇಸ್‌ ಎಕ್ಸ್‌ ಸಂಸ್ಥೆಯ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಹಾರಿಬಿಟ್ಟ ಬೆಂಗಳೂರು ಮೂಲಕ ಪಿಕ್ಸೆಲ್‌ ಕಂಪನಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೂಲದ ಭಾರತದ ಸ್ಪೇಸ್‌ ಟೆಕ್‌ ಸ್ಟಾರ್ಟ್‌ಅಪ್‌ ಸಂಸ್ಥೆಯಾದ ಪಿಕ್ಸೆಲ್‌ ದೇಶದ ಮೊದಲ ಖಾಸಗಿ ಉಪಗ್ರಹಗಳ ನಕ್ಷತ್ರಪುಂಜ(ಸಮೂಹ) ‘ಫೈಲ್‌ಪ್ಲೈ’ ಅನ್ನು ಯಶಸ್ವಿಯಾಗಿ ಗಗನದಲ್ಲಿ ಕೂರಿಸಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಇದು ವಿಶ್ವದ ಪ್ರಮುಖ ಹೈರೆಸಲ್ಯೂಷನ್‌ ಹೈಪರ್‌ಸ್ಪೆಕ್ಟ್ರಲ್‌ ಉಪಗ್ರಹ ನಕ್ಷತ್ರಪುಂಜವಾಗಿದೆ ಎಂದು ಹೇಳಿದ್ದಾರೆ.

ಈ ಸಾಧನೆಗಾಗಿ ಪಿಕ್ಸೆಲ್‌, ಇಸ್ರೋ ಮತ್ತು ಐಎನ್‌-ಎಸ್‌ಪಿಎಸಿಇಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ. ಸಂಸ್ಥೆಯು ಒಟ್ಟು 18 ಉಪಗ್ರಹಗಳ ಸಮೂಹವನ್ನು ಬಾಹ್ಯಾಕಾಶದಲ್ಲಿ ಕೂರಿಸಿ ಅತ್ಯಾಧುನಿಕ ರೀತಿಯಲ್ಲಿ ಹವಾಮಾನ ಮತ್ತು ಭೂಮಿಯ ವಾತಾವರಣದ ಕರಾರುವಕ್ಕಾದ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಿದೆ.

Related Posts

Leave a Reply

Your email address will not be published. Required fields are marked *