ನವದೆಹಲಿ: ಆಪರೇಷನ್ ಸಿಂಧೂರ್ ಯಶಸ್ಸಿನ ಬೆನ್ನಲ್ಲೇ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯ ಬಲವರ್ಧನೆಗೆ 50,000 ಕೋಟಿ ರೂ. ನೆರವು ಘೋಷಿಸಿದೆ.
ಆಪರೇಷನ್ ಸಿಂಧೂರ್ ಯಶಸ್ಸಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ 50 ಸಾವಿರ ಕೋಟಿ ರೂ. ರಕ್ಷಣಾ ಇಲಾಖೆಗೆ ನೀಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ರಕ್ಷಣಾ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಮೊತ್ತ 7 ಲಕ್ಷ ಕೋಟಿ ರೂ.ಗೆ ಏರಿಕೆಯಾದಂತಾಗಿದೆ.
ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನಲ್ಲಿ ಸೇನಾಪಡೆಗಳಿಗೆ 6.81 ಲಕ್ಷ ರೂ. ಮೀಸಲಿಡಲಾಗಿತ್ತು. ಕಳೆದ 2024-25ನೇ ಸಾಲಿನಲ್ಲಿ 6.22 ಲಕ್ಷ ಕೋಟಿ ರೂ. ಮೀಸಲಿಡಲಾಗಿದ್ದು, ಇದಕ್ಕೆ ಹೋಲಿಸಿದರೆ ಈ ಬಾರಿ ಶೇ.9.2 ರಷ್ಟು ಏರಿಕೆ ಮಾಡಿದಂತೆ ಆಗಿದೆ.
ಹೆಚ್ಚುವರಿ ಶಸ್ತ್ರಾಸ್ತ್ರ ಖರೀದಿ, ಅಗತ್ಯ ವಸ್ತುಗಳ ಖರೀದಿ ಹಾಗೂ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಸಂಶೋಧನೆಗೆ ಬಳಕೆಯಾಗಲಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿ ಆದಾಗ ರಕ್ಷಣಾ ಇಲಾಖೆಗೆ 2.29 ಲಕ್ಷ ಕೋಟಿ ರೂ. ರಕ್ಷಣಾ ಇಲಾಖೆಗೆ ಮೀಸಲಿಟ್ಟಿದ್ದರು. ಇದೀಗ ಈ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. ಇದು ಎಲ್ಲಾ ಇಲಾಖೆಗಳಿಗೆ ಹೋಲಿಸಿದರೆ ಅತೀ ಹೆಚ್ಚು ಶೇ.13ರಷ್ಟು ಪಾಲು ರಕ್ಷಣಾ ಇಲಾಖೆಗೆ ಹೋಗುತ್ತದೆ.