ಮಹಾರಾಷ್ಟ್ರದ ಮೂರ್ತಿಜಾಪುರದಲ್ಲಿ ವರನಿಗೆ ಸಿಬಿಲ್ ಸ್ಕೋರ್ ಕಡಿಮೆ ಇದೆ ಅನ್ನೋ ಕಾರಣಕ್ಕೆ ವಧುವಿನ ಮನೆ ಯವರು ಮದುವೆಯನ್ನೇ ರದ್ದುಗೊಳಿಸಿರುವ ಪ್ರಕರಣ ನಡೆದಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.
ವಧು-ವರರು ಮತ್ತು ಅವರ ಕುಟುಂಬದವರು ಪರಸ್ಪರ ಇಷ್ಟಪಟ್ಟು ಮದುವೆ ಬಹುತೇಕ ಫಿಕ್ಸ್ ಆದ ನಂತರ, ವಧುವಿನ ಮಾವ ವರನ ಸಿಬಿಲ್ ಸ್ಕೋರ್ ಚೆಕ್ ಮಾಡಲು ಮುಂದಾಗಿ ಈ ಅವಾಂತರ ನಡೆದಿದೆ.
ವರನಿಗೆ ಸಿಬಿಲ್ ಸ್ಕೋರ್ ತುಂಬಾ ಕಡಿಮೆ ಇತ್ತು, ಅವನ ಹೆಸರಿನಲ್ಲಿ ನಾನಾ ಬ್ಯಾಂಕ್‌ಗಳಲ್ಲಿ ಸಾಲಗಳು ಇದ್ದವು. ಕಡಿಮೆ ಸಿಬಿಲ್ ಸ್ಕೋರ್ ಇರುವ ಕಾರಣ ವರ ಆರ್ಥಿಕವಾಗಿ ಸಮರ್ಥನಿಲ್ಲ ಎಂದು ವಧುವಿನ ಮನೆಯವರು ತೀರ್ಮಾನಿಸಿ ಮದುವೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಮದುವೆಯನ್ನು ಸಂಪೂರ್ಣವಾಗಿ ವಿರೋಧಿಸಿದ ವಧುವಿನ ಮಾವ, ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಯುವಕ ತನ್ನ ಸೊಸೆಗೆ ಸೂಕ್ತ ಪತಿ ಆಗುವುದಿಲ್ಲ, ಭವಿಷ್ಯದಲ್ಲಿ ಆಕೆಗೆ ಆರ್ಥಿಕ ಭದ್ರತೆ ಒದಗಿಸಲು ಅವನಿಗೆ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಯುವತಿಯ ಕುಟುಂಬದ ಇತರ ಸದಸ್ಯರೂ ಆ ಅಭಿಪ್ರಾಯಕ್ಕೆ ಒಪ್ಪಿ ಮದುವೆಯಿಂದ ಹಿಂದೆ ಸರಿದರು ಎನ್ನಲಾಗಿದೆ.