ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪ್ರಜ್ವಲ್ ದೇವರಮನಿ (15) ಮತ್ತು ಸನತ್ ಭೂಸರೆಡ್ಡಿ (14) ಮೃತ ಬಾಲಕರು.
ಸೈಕಲ್ ತೆಗೆದುಕೊಂಡು ಕೆರೆಗೆ ಈಜಲು ಹೋಗಿದ್ದ ಬಾಲಕರು ಸೈಕಲ್ ಅನ್ನು ಕೆರೆಯ ದಡದಲ್ಲಿ ಬಿಟ್ಟು ಈಜಲು ನೀರಿಗಿಳಿದು ಈಜಲು ಬಾರದೆ ಮುಳುಗಿ ಮೃತಪಟ್ಟಿದ್ದಾರೆ.
ಕೆರೆಯ ದಡದಲ್ಲಿ ಸೈಕಲ್ ಹಾಗೂ ಬಟ್ಟೆಗಳು ಇರುವುದನ್ನು ಗಮನಿಸಿದ ಸ್ಥಳೀಯರು ಕೆರೆಯಲ್ಲಿ ಬಾಲಕರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಒಬ್ಬನ ಮೃತದೇಹ ಕೆರೆಯಿಂದ ಹೊರತೆಗೆದಿದ್ದಾರೆ. ಇನ್ನೋರ್ವ ಬಾಲಕನ ಮೃತದೇಹ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶಿಗ್ಗಾಂವಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಗೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.