ಥಾಣೆಯ ದೇಸಾಯಿ ಗ್ರಾಮದಲ್ಲಿ ತೊರೆಯೊಂದರ ಸಮೀಪ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿದ ಆರೋಪದಡಿ ಲಿವ್-ಇನ್ ಪಾರ್ಟನರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ವಾರದ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಅದಾದ ಮರುದಿನ ಆರೋಪಿಯು ಯುವತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತೊರೆಯ ಬಳಿ ಎಸೆದಿರುವುದಾಗಿ ತನಿಖಾಧಿಖಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಿಯಾಂಕಾ ವಿಶ್ವಕರ್ಮ(22) ಕೊಲೆಯಾಗಿರುವ ಯುವತಿ. ಯುವತಿಯ ಕೈ ಮೇಲೆ ‘ಪಿವಿಎಸ್’ ಎಂಬ ಹಚ್ಚೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾಮಾಜಿಕ ಮಾಧ್ಯಮ ಮತ್ತು ಪ್ರದೇಶದ ಸಿಸಿಟಿವಿ ದೃಶ್ಯಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ದೇಸಾಯಿ ಗ್ರಾಮದ ವಿನೋದ್ ಶ್ರೀನಿವಾಸ್ ವಿಶ್ವಕರ್ಮ(50) ಎಂಬಾತನನ್ನು ಬಂಧಿಸಿದ್ದಾರೆ.
ಮೃತ ಯುವತಿ ಐದು ವರ್ಷಗಳಿಂದ ಆರೋಪಿಯೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಆರೋಪಿ ಆಕೆಯನ್ನು ಕೊಂದು ಒಂದು ದಿನ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದು, ಕೆಟ್ಟ ವಾಸನೆ ಬರುತ್ತಿದ್ದಂತೆ ಸೂಟ್‌ಕೇಸ್‌ನಲ್ಲಿ ತುಂಬಿಸಿ ತೊರೆಯ ಬಳಿ ಸೇತುವೆಯಿಂದ ಎಸೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


