Menu

ತಮಿಳುನಾಡಿನಲ್ಲಿ ಮಹಿಳೆಯರಿಗೆ ಭರಪೂರ ಯೋಜನೆ ಘೋಷಿಸಿದ ದಳಪತಿ ವಿಜಯ್‌

vijay

ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಹಿಳಾ ಮತದಾರರ ಗಮನ ಸೆಳೆದಿದೆ.  ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಪ್ರಚಾರವನ್ನು ತೀವ್ರಗೊಳಿವೆ.  ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ವಿಜಯ್‌ ಘೋಷಿಸಿದ್ದಾರೆ.

ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಆರ್ಥಿಕ ಸಹಾಯ ನೀಡುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಗೆ ನೆರವಾಗುವುದರೊಂದಿಗೆ ಮಹಿಳಾ ಸ್ವಾವಲಂಬನೆಗೆ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಮದುವೆಯಾಗುವ ಯುವತಿಯರಿಗೆ ಸರ್ಕಾರದಿಂದ ಎಂಟು ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ ನೀಡಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮದುವೆ ಖರ್ಚಿನ ಭಾರ ಕಡಿಮೆಗೊಳಿಸುವುದಾಗಿ ಟಿವಿಕೆ ಪಕ್ಷ ಹೇಳಿದೆ.

ಮಹಿಳೆಯರಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ವ್ಯವಸ್ಥೆ, ಶಾಲೆಗಳು, ಕಾಲೇಜುಗಳು ಮತ್ತು ರೇಷನ್ ಅಂಗಡಿಗಳ ಮೂಲಕ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡುವ ಯೋಜನೆಯನ್ನೂ ವಿಜಯ್‌ ಘೋಷಿಸಿದ್ದಾರೆ.

ಪ್ರತಿ ಕುಟುಂಬಕ್ಕೂ ವರ್ಷಕ್ಕೆ ಆರು ಉಚಿತ LPG ಸಿಲಿಂಡರ್ ನೀಡಲಾಗುತ್ತದೆ, ಇದು ಕುಟುಂಬಗಳ ಜೀವನ ವೆಚ್ಚವನ್ನು ಕಡಿಮೆ ಮಾಡುವ ಪ್ರಮುಖ ಕ್ರಮ ಎಂದು ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ₹15,000 ಪ್ರೋತ್ಸಾಹಧನ ನೀಡಲಾಗುತ್ತದೆ. ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತ ಕುಟುಂಬಗಳ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡುವ ಯೋಜನೆ ಘೋಷಿಸಲಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಸಿಸಿಟಿವಿ ಕ್ಯಾಮೆರಾ ಮತ್ತು ಬೀದಿ ದೀಪಗಳನ್ನು ಹೆಚ್ಚಿಸುವ ಯೋಜನೆ ಅನುಷ್ಠಾನಗೊಳಿಸುವುದು, ಮಹಿಳಾ ಸುರಕ್ಷತೆಗೆ ವಿಶೇಷ ಪಡೆ ರಚನೆ, ಈ ಪಡೆಯ ಮಹಿಳಾ ಅಧಿಕಾರಿಗಳು ಬಾಡಿ ಕ್ಯಾಮೆರಾಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸುವುದು, ತುರ್ತು ಪರಿಸ್ಥಿತಿಯಲ್ಲಿ ಐದು ನಿಮಿಷಗಳೊಳಗೆ ಸಹಾಯ ನೀಡುವಂತೆ ವ್ಯವಸ್ಥೆ ಕಲ್ಪಿಸುವುದಾಗಿ ವಿಜಯ್‌ ಭರವಸೆ ನೀಡಿದ್ದಾರೆ.

ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ನೋಂದಾಯಿತ ಸಣ್ಣ ಉದ್ಯಮಗಳಾಗಿ ರೂಪಾಂತರಗೊಳ್ಳುವ ಸಂಘಗಳಿಗೆ ವರ್ಷಕ್ಕೆ 5 ಲಕ್ಷ ರೂ.ದವರೆಗೆ 100% ಅನುದಾನ ನೀಡುವ ಯೋಜನೆ ಘೋಷಿಸಲಾಗಿದೆ.

ರಾಜ್ಯದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಸರ್ಕಾರದಿಂದ ಚಿನ್ನದ ಉಂಗುರ ನೀಡುವ ‘ತಾಯಿ ಮಾಮನ್’ ಯೋಜನೆ ಜಾರಿಗೊಳಿಸಿ ಮಗುವಿಗೆ ಬೇಕಾದ ಬಟ್ಟೆ, ಸಾಬೂನು, ಆಟಿಕೆಗಳು, ಸೊಳ್ಳೆಪರದೆ ಮತ್ತು ನ್ಯಾಪ್ಕಿನ್ ಒಳಗೊಂಡ ಬೇಬಿ ಕಿಟ್ ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *