ಮಂಡ್ಯ: ಕಾರಿಗೆ ಕೆಎಸ್ಸಾರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಅರಸ್ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಅಸುನೀಗಿದ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ತೂಬಿನಕಅರೆಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಎಕ್ಸಿಟ್ ಬಳಿ ಸಂಭವಿಸಿದೆ.
ಬೆಂಗಳೂರಿನ ಜೆ.ಪಿ.ನಗರದ ಅರಸ್ ಕುಟುಂಬದ ಸತ್ಯಾನಂದ ರಾಜೇ ಅರಸ್ (51), ಪತ್ನಿ ನಿಶ್ಚಿತಾ (45), ಚಂದ್ರು (62), ಪತ್ನಿ ಸುವೇದಿನಿ ರಾಣಿ (50) ಮೃತ ದುರ್ದೈವಿಗಳು.
ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮದಲ್ಲಿ ಸತ್ಯಾನಂದರಾಜೇ ಅರಸ್ ಅವರ ಮಾವ ತೀರಿಕೊಂಡಿದ್ದು ಅವರ ಅಂತ್ಯಕ್ರಿಯೆಗೆಂದು ಕಾರಿನಲ್ಲಿ ಕುಟುಂಬ ಪ್ರಯಾಣಿಸುತ್ತಿತ್ತು.
ಬೆಂಗಳೂರಿನಿಂದ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನ ಎಕ್ಸಿಟ್ ಬಳಿ ಚಾಲಕ ಗೊಂದಲಕ್ಕೆ ಒಳಗಾಗಿದ್ದಾನೆ. ಕಾರನ್ನು ಹಿಂದಕ್ಕೆ ಪಡೆದು ಎಕ್ಸ್ ಪ್ರೆಸ್ ವೇಗೆ ತಿರುಗಿಸುತ್ತಿದ್ದಾಗ ವೇಗವಾಗಿ ಹಿಂದಿನಿಂದ ಬಂದ ಐರಾವತ ಬಸ್ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ ೧೫ ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ದಕ್ಷಿಣ ವಯಲ ಡಿಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಹಾಗೂ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಸತ್ಯಾನಂದರಾಜೇ ಅರಸ್ ಹಾಗೂ ಚಂದ್ರರಾಜೇ ಅರಸ್ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಚಂದ್ರರಾಜೇ ಅರಸ್ ಪತ್ನಿ ಸುವೇದಿನಿ ರಾಣಿ, ಸಹೋದರ ಸತ್ಯಾನಂದರಾಜೇ ಅರಸ್, ಪತ್ನಿ ನಿಶ್ಚಿತಾ ತೆರಳುತ್ತಿದ್ದರು. ಚಂದ್ರರಾಜೇ ಅರಸ್ ಕಾರು ಚಾಲನೆ ಮಾಡುತ್ತಿದ್ದರು. ಸತ್ಯಾನಂದರಾಜೇ ಅರಸ್ ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್ ಆಗಿದ್ದರೆ, ಚಂದ್ರರಾಜೇ ಅರಸ್ ನಿವೃತ್ತ ಜೆಇ. ಸದ್ಯ ಮೃತದೇಹಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.