ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಹತ್ತು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಮೌನಿ ಅಮಾವಾಸ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಧಾವಿಸುತ್ತಿದ್ದು, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ನಡೆದಿದೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನ ಸೆಕ್ಟರ್ ೨ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ. ಇಂದು ಒಂದೇ ದಿನ ಹತ್ತು ಕೋಟಿ ಜನರು ಅಮೃತ ಸ್ನಾನ ಮಾಡುವ ನಿರೀಕ್ಷೆ ಇದೆ.
ಕಾಲ್ತುಳಿತ ಉಂಟಾಗಿದ್ದರಿಂದ ಪ್ರಯಾಗ್‌ರಾಜ್ ಸಂಪರ್ಕಿಸುತ್ತಿದ್ದ ಹಲವು ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಪ್ರಯಾಗರಾಜ್‌ಗೆ ಹೋಗುವ ಮಹಾಕುಂಭಮೇಳದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಸಂಗಮದ ಎಲ್ಲಾ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಜನರಲ್ಲಿ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯೋಗಿ, ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ. ಮೊದಲು ಭಕ್ತರು ಪುಣ್ಯಸ್ನಾನ ಮಾಡಲಿ. ಆಮೇಲೆ ನಾವು ಸ್ನಾನ ಮಾಡುವುದಾಗಿ ಸಾಧು ಸಂತರು, ಅಖಾಡಗಳ ಮುಖ್ಯಸ್ಥರು ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು ದೂರ ನಡೆಯಬೇಡಿ. ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರೂ ಅದು ಗಂಗಾ ನದಿಯ ನೀರು. ಮೌನಿ ಅಮವಾಸ್ಯೆ ಗಂಗಾ ಸ್ನಾನ ಪುಣ್ಯ ಪ್ರಾಪ್ತಿ ಮಾಡಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಸ್ತೋಮ ಇರುವುದರಿಂದ ಜನರು ಸಂಯಮದಿಂದ ವರ್ತಿಸಿ ಎಂದು ಮನವಿ ಮಾಡಿದ್ದಾರೆ.
ಬೆಳಗಾವಿ ನಗರದ ಶೆಟ್ಟಿ ಗಲ್ಲಿ ದಂಪತಿ ಕಾಲ್ತುಳಿತದಲ್ಲಿ ಗಾಯವಾಗಿರುವುದು ತಿಳಿದುಬಂದಿದೆ. ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಗಾಯಗೊಂಡಿದ್ದು ಪ್ರಯಾಗ್ರಾಜ್ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತದ ವೇಳೆ ದಂಪತಿ ಬೇರೆ ಬೇರೆಯಾಗಿದ್ದಾರೆ.
ಮೈಸೂರು ತಾಲೂಕಿನ ಮಂಟಿಕ್ಯಾತನಹಳ್ಳಿ ನಿವಾಸಿ ರಾಮಕೃಷ್ಣ ಶರ್ಮಾ, ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ನಿವಾಸಿ ಅರುಣ್ ಶಾಸ್ತ್ರಿ ಪ್ರಯಾಗ್‌ರಾಜ್ ಯಾತ್ರೆ ಮುಗಿಸಿ ಕಾಶಿಗೆ ಬರುತ್ತಿದ್ದಾಗ ಉತ್ತರಪ್ರದೇಶದ ಮಿರ್ಜಾಪುರ ಬಳಿ ಲಾರಿ ಮತ್ತು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.