ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಪೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
ಬೆಟ್ಟದ ಹಿಂಬಾಗದಲ್ಲಿರುವ ಬಂಡೆಗಲ್ಲಿನ ಮೇಲೆ ನಿಂತು ಕೆಲವು ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಆಂಜನೇಯನ ದರ್ಶನ ಪಡೆಯುಲು ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದಿಂದ ಇಳಿಯುವ ಮೊದಲೇ ಬೆಟ್ಟದ ಮೇಲಿರುವ ಬಂಡೆಗಲ್ಲಿನ ಮೇಲಿಂದ 30 ರಿಂದ 40 ಅಡಿ ಕೆಳಗೆ ಬಿದ್ದಿದ್ದಾಳೆ. ಕೆಳಕ್ಕೆ ಬೀಳುತ್ತಿದ್ದಂತೆ ಜೋರಾಗಿ ಕಿರುಚಾಡಿ ಸದ್ದು ಕೇಳಿದ ಭಕ್ತರು ದೇವಸ್ಥಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ದೇವಾಲಯದ ಸಿಬ್ಬಂದಿ ಯುವತಿ ಬಳಿ ಹೋಗಿದ್ದಾರೆ. ಆಕೆ ಜೀವಂತ ಇದ್ದಿದ್ದರಿಂದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಎರಡು ಗಂಟೆ ಕಾರ್ಯಾಚರಣೆ ಬಳಿಕ ಬೆಟ್ಟದಿಂದ ಯುವತಿಯನ್ನು ಹೊರಗೆ ತರಲಾಯಿತು. ಮೊದಲಿಗೆ ಗಂಗಾವತಿ ತಾಲೂಕು ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ರಾಯಚೂರು ಮೂಲದ ಅಶ್ವಿನಿ ಎಂಬುದು ಗೊತ್ತಾಗಿದೆ.
ಕೊಪ್ಪಳ ಜಿಲ್ಲಾ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿರುವ ಯುವತಿಗೆ ಚಿಕಿತ್ಸೆ ಮುಂದುವರಿದಿದೆ.