“ಭಕ್ತ ಹಾಗೂ ಭಗವಂತನ ನಡುವೆ ಭಕ್ತಿ ಸೇರಿದಂತೆ ನಮ್ಮ ಕಷ್ಟ ಸುಖ, ದುಃಖ ದುಮ್ಮಾನಗಳು ವಿನಿಮಯವಾಗುವ ಸ್ಥಳವೇ ದೇವಾಲಯ. ನಾವೆಲ್ಲರೂ ಪ್ರಾರ್ಥಿಸುವುದಕ್ಕೆ ದೇವಾಲಯಗಳಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಚಿಕ್ಕಬಾಣಾವರದ ರಾಮಚಂದ್ರ ದೇಗುಲ ಜೀರ್ಣೋದ್ದಾರ ಪುನಃ ಪ್ರತಿಷ್ಟಾಪನೆ ಹಾಗೂ ವೆಂಕಟೇಶ್ವರಸ್ವಾಮಿ ನೂತನ ಸ್ಥಿರ ಬಿಂಬ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ದರು.
“ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎನ್ನುವ ಮಾತಿದೆ. ಧರ್ಮಸ್ಥಳ ಮಂಜುನಾಥನ ಮುಂದೆ ನಾವು ಆಡಿದ ಮಾತನ್ನ ಆತ ನಡೆಸಿಯೇ ತೀರುತ್ತಾನೆ. ಅದೇ ರೀತಿ ತಿಮ್ಮಪ್ಪ ನಮ್ಮಿಂದ ಎಷ್ಟನ್ನು ಪಡೆಯಬೇಕೋ ಅದನ್ನು ಪಡೆದೇ ಪಡೆಯುತ್ತಾನೆ. ಆತನ ಬಲಗೈ ಗಮನಿಸಿದರೆ ನಮ್ಮಿಂದ ಪಡೆಯುವಂತೆಯೇ ಇದೆ. ಆದರೆ ಪಕ್ಕದಲ್ಲಿರುವ ಪದ್ಮಾವತಿ ಕೈ ಗಮನಿಸಿ ಆಕೆ ಮತ್ತೆ ಭಕ್ತರಿಗೆ ಮರಳಿ ನೀಡುವಂತೆ ತೋರುತ್ತದೆ. ದುಃಖವನ್ನು ದೂರ ಮಾಡುವ ದುರ್ಗಾದೇವಿ ಸ್ವರೂಪವೇ ಪದ್ಮಾವತಿ ದೇವಿ” ಎಂದರು.
“ಈ ವೆಂಕಟೇಶ್ವರನ ದೇವಾಲಯ ಚಿಕ್ಕ ತಿರುಪತಿಯು ಅಲ್ಲ, ದೊಡ್ಡ ತಿರುಪತಿಯೂ ಅಲ್ಲ, ಮಧ್ಯಮ ತಿರುಪತಿ ಎಂದು ಸಿದ್ದಗಂಗೆಯ ಸಿದ್ದಲಿಂಗ ಸ್ವಾಮಿಜೀಯವರು ಹೊಸ ನಾಮಕರಣ ಮಾಡಿದ್ದಾರೆ. ಈ ಹೆಸರು ಸೂಕ್ತವಾಗಿದೆ. ದೇವಾಲಯ ನಿರ್ಮಾಣ ಮಾಡಿದ ಸ್ಥಳವನ್ನು ಪವಿತ್ರ ಭೂಮಿ ಎಂದು ಕರೆಯಲಾಗುತ್ತದೆಯಂತೆ. ಈ ಜಾಗ ಪವಿತ್ರವಾಗಿರುವ ಕಾರಣಕ್ಕೆ ಇಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ” ಎಂದು ಹೇಳಿದರು.
“ಮುಖಂಡರಾದ ರಾಜಶೇಖರ್ ಅವರ ಕುಟುಂಬ ವರ್ಗ ಸೇರಿದಂತೆ ಪುರುಷೋತ್ತಮ್, ಕೃಷ್ಣಪ್ಪ, ಅಶೋಕ್ ಅವರ ಕುಟುಂಬದವರು ಈ ದೇವಾಲಯವನ್ನು ತಮ್ಮ ಮನೆಯ ಸ್ವಂತ ಕಾರ್ಯಕ್ರಮ ದಂತೆ ನೆರವೇರಿಸಿದ್ದಾರೆ. ಇದೆಲ್ಲವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನನ್ನದಾಗಿದೆ. ಈ ದೇವಾಲಯಕ್ಕಾಗಿ ತಾವು ದುಡಿದ 7-8 ಕೋಟಿ ಹಣ ಖರ್ಚು ಮಾಡಿದ್ದಾರೆ. ಇದನ್ನ ಮುಜರಾಯಿ ಇಲಾಖೆಗೆ ಸೇರಿಸದೆ ನೀವೇ ನಿರ್ವಹಣೆ ಮಾಡಿ” ಎಂದು ಸಲಹೆ ನೀಡಿದರು.
“ಈ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಶಿವ, ಪಾರ್ವತಿ, ಶ್ರೀರಾಮ, ಆಂಜನೇಯಸ್ವಾಮಿಯ ದೇವಾಲಯಗಳಿವೆ. ಇಲ್ಲಿರುವ ದೇವಾನು ದೇವತೆಗಳಂತೆ ಪ್ರಜಾ ದೇವರುಗಳು ರಾಜ ಕಾರಣಿಗಳಿಗೆ ಹೆಚ್ಚು ಮುಖ್ಯವಾದವರು. ಹನುಮಂತನಂತೆ ನಾವುಗಳೂ ಪ್ರಜಾ ಸೇವಕರು. ಇಡೀ ದೇಶದಲ್ಲಿ ಎಲ್ಲಿಯೂ ಸಹ ರಾಮನ ತಂದೆ ದಶರಥನ ದೇವಾಲಯವಿಲ್ಲ. ಆದರೆ ರಾಮನ ಭಂಟ ಹನುಮನ ದೇವಾಲಯವಿದೆ. ಆತ ಪ್ರಾಮಾಣಿಕ ಸಮಾಜ ಸೇವಕ. ಆದ ಕಾರಣಕ್ಕೆ ಜನರು ಹೆಚ್ಚು ಆಂಜನೇಯನ ದೇವಾಲಯಗಳನ್ನು ನಿರ್ಮಾಣ ಮಾಡುತ್ತಾರೆ” ಎಂದರು.


