Wednesday, November 05, 2025
Menu

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಕೆ ಶಿವಕುಮಾರ್

“ಬಿಹಾರದಲ್ಲಿ ಬದಲಾವಣೆ ತರಲು ಮಹಾಘಟಬಂಧನಕ್ಕೆ ಮತ ಹಾಕಿ, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬೇಕು ಎಂದು ಮತದಾರರಿಗೆ ಮನವಿ ಮಾಡಿದ್ದೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಕಾರ್ಯಕ್ರಮ ನಡೆದ ಖಾಸಗಿ ಹೊಟೇಲ್ ಬಳಿ ಶಿವಕುಮಾರ್  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಬಿಹಾರಿ ಮತದಾರರಿಗೆ ವೇತನ ಸಹಿತ ರಜೆ ನೀಡುವಂತೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮೊದಲ ಹಕ್ಕು. ನಮ್ಮ ಮತ ನಮ್ಮ ಹಕ್ಕು. ಹೀಗಾಗಿ ನಮ್ಮ ದೇಶದಲ್ಲಿ ನಮ್ಮ ಜನ ಮತದಾನ ಮಾಡಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಎಲ್ಲಾ ಸಂಸ್ಥೆಗಳು ಬಿಹಾರದ ಮತದಾರರಿಗೆ ವತನ ಸಹಿತ ರಜೆ ನೀಡಬೇಕು ಎಂದು ಮನವಿ ಮಾಡಿದ್ದೇನೆ” ಎಂದು ತಿಳಿಸಿದರು.

ಬಿಹಾರ ಚುನಾವಣೆಯಲ್ಲಿ ಆರ್ ಜೆಡಿ ಹಾಗೂ ಕಾಂಗ್ರೆಸ್ ಬಹಳಷ್ಟು ಆತ್ಮ ವಿಶ್ವಾಸದಲ್ಲಿದೆ ಎಂದು ಕೇಳಿದಾಗ, “ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಹೀಗಾಗಿ ನಾವು ಆತ್ಮವಿಶ್ವಾಸದಲ್ಲಿದ್ದೇವೆ. ಇದೇ ದೇಶದ ಒತ್ತಾಸೆಯಾಗಿದೆ” ಎಂದರು.

ಬಿಹಾರ ಮತದಾರರಿಗಾಗಿ ವಿಶೇಷ ರೈಲು ವ್ಯವಸ್ಥೆಗೆ ಮನವಿ ಮಾಡುತ್ತೀರಾ ಎಂದು ಕೇಳಿದಾಗ, “ಈಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಇಲ್ಲಿನ ಬಿಹಾರ ರಾಜ್ಯದ ಕಾರ್ಮಿಕರಿಗೆ ವೇತನ ಸಹಿತ ರಜೆ ಸಿಕ್ಕರೆ ಸಾಕು. ಅವರು ಹೋಗಿ ಮತದಾನ ಮಾಡಿ ಬರುತ್ತಾರೆ. ನಾನು ಕೇಂದ್ರ ಸರ್ಕಾರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲರಿಗೂ ಸಹಾಯ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಬಿಹಾರದ ಜನ ಇಲ್ಲಿಗೆ ಬಂದು ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಅವರು ಶ್ರಮಪಟ್ಟು ಕೆಲಸ ಮಾಡುತ್ತಿದ್ದು, ಅವರ ಬಗ್ಗೆ ಹೆಮ್ಮೆ ಇದೆ. ಅವರು ತಮ್ಮದೇ ಸಂಘ ಸ್ಥಾಪಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೇನೆ.  ಅಸ್ಸಾಂ ಸೇರಿದಂತೆ ಕೆಲವು ರಾಜ್ಯಗಳ ಜನರು ಸಂಘ ಸ್ಥಾಪಿಸಲು ಅರ್ಜಿ ನೀಡಲಾಗುವುದು. ಅವರು ಆಗಾಗ ಭೇಟಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು” ಎಂದು  ಹೇಳಿದರು.

Related Posts

Leave a Reply

Your email address will not be published. Required fields are marked *