ಚಿಕ್ಕಮಗಳೂರು ನರಸಿಂಹರಾಜಪುರ ತಾಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ವ್ಯಕ್ತಿ ಅಭಿಷೇಕ್ (27)ಗದಗದವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಅಭಿಷೇಕ್ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಇತರ ಗೆಳೆಯರೊಂದಿಗೆ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸ್ಥಳೀಯ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಅವರು, ಸೋಮವಾರ ಬೆಳಿಗ್ಗೆ ಭದ್ರಾ ನದಿಗೆ ಈಜಲು ತೆರಳಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ಕೊಚ್ಚಿಕೊಂಡು ಹೋಗಿದ್ದಾರೆ.
ಅಭಿಷೇಕ್ ನಾಪತ್ತೆಯಾದ ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿ ಬನ್ನೂರು ಗ್ರಾಮದ ಸಮೀಪ ನದಿಯಲ್ಲೇ ಮೃತದೇಹ ಪತ್ತೆಯಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗುಂಪು ಗಲಾಟೆ: ಯುವಕ ಸಾವು
ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಸಮೀಪ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮರಳಿಗ ಗ್ರಾಮದ ಯಶವಂತ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದು, ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಬಾರ್ನಲ್ಲಿ ಸಿಗರೇಟ್ ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದಿತ್ತು. ರಾಜಿ ಮಾತುಕತೆ ನಡೆಯುವ ವೇಳೆ ಮತ್ತೆ ಜಗಳವಾಗಿದೆ. ಯುವಕರು ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದು, ಯಶವಂತ್ ಮೃತಪಟ್ಟಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


