ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿರುವ ಯುವಕನೊಬ್ಬ ಡೇಟಿಂಗ್ ಆ್ಯಪ್ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ರಚಿಸಲಾದ ಇಶಾನಿ ಎಂಬ ಹುಡುಗಿಯ ಬೇಡಿಕೆಯಂತೆ ತನ್ನ ಬೆತ್ತಲೆ ಪೋಟೊಗಳನ್ನು ಕಳಿಸಿ ಬಳಿಕ ಬೆದರಿಕೆಗೆ ಮಣಿದು ಹಣ ಕಲೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಪ್ರಕರಣದ ಬಗ್ಗೆ ಟೈಮ್ಸ್ ಆಪ್ ಇಂಡಿಯಾದಲ್ಲಿ ವರದಿಯಾಗಿದೆ. ಈಜಿಪುರದ ಯುವಕ ಜನವರಿ 5 ರಂದು ಡೇಟಿಂಗ್ ಅಪ್ಲಿಕೇಶನ್ ಆ್ಯಪ್ನಲ್ಲಿ ಪ್ರೊಫೈಲ್ ರಚಿಸಿದ ತಕ್ಷಣ ಇಶಾನಿ ಎಂಬ ಹೆಸರಿನಿಂದ ರಿಕ್ವೆಸ್ಟ್ ಬಂದಿದೆ. ಇಬ್ಬರು ಏಕಾಂತವಾಗಿ ಮಾತನಾಡಲು ಶುರು ಮಾಡಿ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದರು.
ನಂತರ ಯುವಕನಿಗೆ ಯುವತಿ ಕಡೆಯಿಂದ ವೀಡಿಯೊ ಕಾಲ್ ಬಂದಿದೆ. ಬಟ್ಟೆ ಬಿಚ್ಚಿ ಯುವತಿ ಆತನ ಮುಂದೆ ಬೆತ್ತಲೆಯಾಗಿದ್ದಾಳೆ. ನೀನು ಬಟ್ಟೆ ಬಿಚ್ಚು ಎಂದು ಹೇಳಿದಾಗ ಆತ ಬೆತ್ತಲೆಯಾಗಿ ದ್ದಾನೆ. ತಾನು ಮತ್ತು ಆಕೆ ಬೆತ್ತಲೆ ಆಗಿರುವ ವೀಡಿಯೊ ರೆಕಾರ್ಡ್ ಆಗಿದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ಸ್ವಲ್ಪ ಸಮಯದ ನಂತರ ಟೆಕ್ಕಿಗೆ ವೀಡಿಯೊ ಕರೆಯ ಸಮಯದಲ್ಲಿ ಸೆರೆಹಿಡಿಯ ಲಾದ ಖಾಸಗಿ ಚಿತ್ರಗಳ ಬಗ್ಗೆ ಸಂದೇಶ ಬಂದಿದೆ. ಈ ವೇಳೆ ಯುವತಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ವೀಡಿಯೊವನ್ನು ನಿನ್ನ ಸ್ನೇಹಿತರು, ಕುಟುಂಬಕ್ಕೆ ಕಳುಹಿಸುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡುವುದಾಗಿ ಹೇಳಿದ್ದಾಳೆ. ಭಯಗೊಂಡ ಯುವಕ ಮೊದಲು 60 ಸಾವಿರ ಹಾಗೂ ನಂತರ 93,000 ರೂ. ಕಳುಹಿಸಿದ್ದಾನೆ. ಇಷ್ಟು ಹಣ ನೀಡಿದ ನಂತರವೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
ಸಂತ್ರಸ್ತ ಟೆಕ್ಕಿ ಪೊಲೀಸರಿಗೆ ದೂರು ನೀಡಿದ ಆಧಾರದ ಮೇಲೆ, ಕೇಂದ್ರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಪ್ರಕರಣದಲ್ಲಿ ಟೆಕ್ಕಿಯನ್ನು ವಂಚಿಸಲು ಎಐ ವೀಡಿಯೊ ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಡೇಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಎಚ್ಚರವಾಗಿರಬೇಕು ಎಂದು ಸೈಬರ್ ಅಪರಾಧ ವಿಭಾಗದ ಹಿರಿಯ ಅಧಿಕಾರಿ ಹೇಳಿದ್ದಾರೆ.


