ಉಗ್ರರ ವಿರುದ್ಧ ಭಾರತದ ವಾಯುಪಡೆಯು ನಡೆಸಿದ ʻಆಪರೇಷನ್ ಸಿಂಧೂರʼ ವಿಜಯೋತ್ಸವ ಆಚರಣೆ ವೇಳೆ ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದಡಿ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿರುವುದು ಐದು ದಿನಗಳ ಬಳಿಕ ಬಹಿರಂಗಗೊಂಡಿದೆ.
ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ. ಛತ್ತಿಸ್‌ಗಢ ಮೂಲದ ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿದ್ದು, ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ವಾಸವಿದ್ದ. ಮೇ 9ರಂದು ಇಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಸ್ಥಳೀಯರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವೈಟ್‌ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರುವುದು ದೃಢಪಟ್ಟಿದೆ, ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.