ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪುಣೆಯ ಕೊಂಧ್ವಾದಲ್ಲಿ ಟೆಕ್ಕಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಜುಬೈರ್ ಹಂಗರ್ಗೇಕರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು. ಪುಣೆ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಶೇಷ ಯುಎಪಿಎ ನ್ಯಾಯಾಲಯ ಆರೋಪಿಯನ್ನು ನವೆಂಬರ್ 4 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಬಂಧಿತ ಆರೋಪಿಯು ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಪಾತ್ರ ವಹಿಸಿದ್ದಾನೆ. ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.
ಸತಾರಾ ದರೋಡೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದ ತನಿಖೆಯ ಭಾಗವಾಗಿ ಅಕ್ಟೋಬರ್ 9 ರಂದು ಎಟಿಎಸ್ ಅಧಿಕಾರಿಗಳು ಜುಬೈರ್ ಸೇರಿದಂತೆ 19 ಶಂಕಿತರ ಮನೆಗಳು ಮತ್ತು ಕೆಲಸದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಆ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಲ್ಯಾಪ್‌ಟಾಪ್‌ಗಳು, ಹಾರ್ಡ್ ಡ್ರೈವ್‌ಗಳು ಮತ್ತು ಸೆಲ್ ಫೋನ್‌ಗಳು ಹಾಗೂ ದಾಖಲೆಗಳು ಮತ್ತು ಪುಸ್ತಕಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು.
ಹಂಗರ್‌ಗೇಕರ್ ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಲಾದ ಅಲ್-ಖೈದಾ ಸಾಹಿತ್ಯ ಇರುವುದು ಪತ್ತೆಯಾಗಿತ್ತು, ಆದ್ದರಿಂದ ಆತನನ್ನು ಬಂಧಿಸಿದ್ದೇವೆ. ಅಂತಹ ವಿಷಯವನ್ನು ಡೌನ್‌ಲೋಡ್ ಮಾಡುವುದು ಅಪರಾಧ ಎಂದು
ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಹಂಗರ್ಗೇಕರ್‌ಗೆ ಅಲ್-ಖೈದಾ ಸದಸ್ಯರೊಂದಿಗೆ ಸಂಪರ್ಕ ಇದೆಯೇ, ಇದ್ದರೆ ಏನು ಮಾಡಲು ಬಯಸಿದ್ದರು ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ. ಆತನ ಸ್ನೇಹಿತನನ್ನು ಪ್ರಶ್ನಿಸುತ್ತೇವೆ ಮತ್ತು ಅವರ ಸೆಲ್‌ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಪರಿಶೀಲಿಸುತ್ತೇವೆ. ಬೇರೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಇದೆಯೇ ಎಂದು ಪರಿಶೀಲಿಸುತ್ತಿರುವುದಾಗಿ ಅಧಿಕಾರಿ ಹೇಳಿದ್ದಾರೆ.


