ವೈಯಕ್ತಿಕ ಖರ್ಚಿನಿಂದ ಸರ್ಕಾರಿ ಶಾಲೆಯ 24 ವಿದ್ಯಾರ್ಥಿಗಳು ಸೇರಿದಂತೆ 40 ಮಂದಿಗೆ ಮುಖ್ಯೋಪಾಧ್ಯಾಯ 2 ದಿನಗಳ ವಿಮಾನ ಪ್ರವಾಸ ಆಯೋಜಿಸಿ ಮಾದರಿಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಬಹದ್ದೂರು ಬಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ 24 ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ವಿಮಾನ ಪ್ರವಾಸ ಹಮ್ಮಿಕೊಂಡಿದ್ದರು.
ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ 5 ಲಕ್ಷ ರೂಪಾಯಿ ಖರ್ಚು ಮಾಡಿ ತಮ್ಮದೇ ಶಾಲೆಯ 5 ರಿಂದ 8 ನೇ ತರಗತಿಯ ತಲಾ 6 ವಿದ್ಯಾರ್ಥಿಗಳಂತೆ 24 ವಿದ್ಯಾರ್ಥಿಗಳು ಮಾತ್ರವಲ್ಲದೇ ಶಾಲೆಯ ಶಿಕ್ಷಕರು, ಬಿಸಿಯೂಟ ತಯಾರಕರು, ಹಾಗೂ SDMC ಸದಸ್ಯರು ಸೇರಿ ಒಟ್ಟು 40 ಜನರನ್ನು ಉಚಿತವಾಗಿ ತೋರಣಗಲ್ನ ಜಿಂದಾಲ್ ಏರ್ಪೋರ್ಟ್ ಮೂಲಕ ಬೆಂಗಳೂರಿಗೆ ವಿಶೇಷ ವಿಮಾನದ ಮೂಲದ ಕರೆದುಕೊಂಡು ಹೋಗಿದ್ದಾರೆ.
ವಿದ್ಯಾರ್ಥಿಗಳ ವಿಮಾನ ಪ್ರವಾಸಕ್ಕೆ ಸಂಸದ ರಾಜಶೇಖರ ಹಿಟ್ನಾಳ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಮಾನ ಪ್ರವಾಸ ಮಾಡಿಸಿದ ಬೀರಪ್ಪ ಅಂಡಗಿ ಬಗ್ಗೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ
ವಿಮಾನ ಪ್ರಯಾಣಕ್ಕೆ ಶಿಕ್ಷಕರು ಆಯೋಜಿಸಿದ್ದ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಕ ಬೀರಪ್ಪ ಪ್ರೋತ್ಸಾಹಿಸಿದರು.
ಬೀರಪ್ಪ ವಿಮಾನ ಪ್ರವಾಸ ಯೋಜನೆ ಹಮ್ಮಿಕೊಂಡಾಗ ಯಾವ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕೆನ್ನುವ ಪ್ರಶ್ನೆ ಕಾಡಿತು. ಆಗ ಅವರು ಐದರಿಂದ ಎಂಟನೇ ತರಗತಿಯ ಮಕ್ಕಳಿಗೆ ಬೇರೊಂದು ಶಿಕ್ಷಕರಿಂದ ಪರೀಕ್ಷೆ ಏರ್ಪಡಿಸಿದ್ದು, ದರು. ಈ ಪರೀಕ್ಷೆಯಲ್ಲಿ ತರಗತಿಗೆ ತಲಾ 6 ವಿದ್ಯಾರ್ಥಿಗಳಂತೆ ಹೆಚ್ಚಿಗೆ ಅಂಕ ಪಡೆದ ಒಟ್ಟು 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಿಮಾನ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿದೆ. ಇಷ್ಟು ದಿನ ವಿಮಾನವನ್ನು ಆಗಸದಲ್ಲಿ ನೋಡಿ ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳು ಇಂದು ತಮ್ಮ ಮುಖ್ಯೋಪಾಧ್ಯಾಯರ ನೆರವಿನಿಂದ ಸ್ವತಃ ವಿಮಾನ ಹತ್ತಿದ್ದಾರೆ.
ವಿದ್ಯಾರ್ಥಿಗಳು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಹಲವು ಪ್ರವಾಸಿ ಸ್ಥಳಗಳಿಗೆ ಹಾಗೂ ಅಧ್ಯಯನ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟಿನಲ್ಲಿ ತಮಗೆ ಅನ್ನ ನೀಡುವ ದೇವರೆಂದು ಭಾವಿಸಿರುವ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಖರ್ಚಿನಿಂದ ವಿಮಾನದಲ್ಲಿ ಪ್ರವಾಸ ಮಾಡಿಸುವ ಮೂಲಕ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಮಾದರಿ ಎನಿಸಿಕೊಂಡಿದ್ದಾರೆ. ಅವರ ಕಾರ್ಯ ಇತರರಿಗೂ ಮಾದರಿ ಆಗಿದೆ.


