ತಾಳಿಕೋಟಿ ಪಟ್ಟಣದಲ್ಲಿ ಡೋಣಿ ನದಿಗೆ ನಿರ್ಮಿಸಿದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಈ ಮುಳುಗಡೆಯಾದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ.
ಡೋಣಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿದೆ. ಹೀಗಿದ್ದರೂ ಸೇತುವೆಯಲ್ಲಿ ಬೈಕ್ ಚಲಾಯಿಸಿದ ಯುವಕ ಸಂತೋಷ ಹಡಪದ (22) ನೀರುಪಾಲಾಗಿದ್ದಾರೆ. ಹಿಂಬದಿ ಸವಾರ ಮಹಾಂತೇಶ ಹೊಸಗೌಡ (20) ಅಪಾಯದಿಂದ ಪಾರಾಗಿದ್ದಾರೆ. ಈ ಇಬ್ಬರು ಯುವಕರು ವಡವಡಗಿಯಿಂದ ತಾಳಿಕೋಟಿ ಪಟ್ಟಣಕ್ಕೆ ಹೋಗುವ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಸೇತುವೆ ಮುಳುಗಡೆಯಾಗಿದ್ದರಿಂದ ತಾಳಿಕೋಟಿ ವಿಜಯಪುರ ರಸ್ತೆ ಸಂಪರ್ಕ ಕಡಿತವಾಗಿದೆ.
ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನೀರು ಪಾಲಾದ ಯುವಕನ ಹುಡಾಕಾಟಕ್ಕೆ ಪೊಲೀಸರು ಹಾಗೂ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.