ಸತ್ಯ ಮತ್ತು ವಾಸ್ತವಾಂಶ ಮರೆಮಾಚುವುದು, ತಮಗೆ ಬೇಕಾದುದನ್ನು ಮತ್ತು ಬೇಕಾದವರನ್ನು ವೈಭವೀಕರಿಸುವುದರಲ್ಲೇ ಇಂದಿನ ಸಿಂಡಿಕೇಟ್ ಪತ್ರಿಕೋದ್ಯಮ ಹೆಚ್ಚು ಸಕ್ರಿಯವಾಗಿದೆ. ಪೂರ್ವಗ್ರಹ ಪೀಡಿತರಾಗಿ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸದೆ ಸುಳ್ಳು ಸುದ್ದಿಗಳನ್ನೇ ಮಾಧ್ಯಮಗಳಲ್ಲಿ ಬಿತ್ತರಿಸಿ ಸತ್ಯವನ್ನು ಸಮಾಧಿಗೊಳಿಸುವ ಆಗುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.
ರಾಮನಗರದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕರಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಾನವೀಯ ಪತ್ರಿಕೋದ್ಯಮ, ಅಭಿವೃದ್ಧಿ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮ ಅಂಚಿಗೆ ಸರಿದಿವೆ. ಈ ಬೆಳವಣಿಗೆ ಪತಿಕೋದ್ಯಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಧರ್ಮ, ಜಾತಿ, ರಾಜಕೀಯ ಪಕ್ಷಗಳ ವಕ್ತಾರರಾಗಿದ್ದಾರೆ. ಮುಕ್ತ ಸ್ವಾತಂತ್ರ್ಯವಿಲ್ಲದ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಾಧ್ಯಮವು ಉದ್ಯಮವಾದಾಗಲೇ ಮೂಲ ಆಶಯ ಹಾದಿ ತಪ್ಪಿಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸುದ್ದಿಮನೆಗಳಲ್ಲಿ ಎಷ್ಟು ಸುದ್ದಿ, ವಿಶೇಷ ವರದಿಗಳನ್ನು ಕೊಡುತ್ತಿದ್ದೀರಿ ಎಂದು ಕೇಳುವ ಬದಲು ಎಷ್ಟು ಆದಾಯ ತಂದಿದ್ದೀರಿ ಎಂದು ಕೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಬ್ಲ್ಯಾಕ್ ಮೇಲ್ ಪಿಡುಗು ಮಿತಿಮೀರಿದೆ. ಇದಕ್ಕೆ ಕಾರಣ ವೃತ್ತಿಯ ಗುಣಮಟ್ಟ ಸುಧಾರಣೆ ಆಗದಿರುವುದು ಎಂದು ಹೇಳಿದರು. ಇಂದು ಜನ ಪತ್ರಕರ್ತರನ್ನು ಅನುಮಾನದಿಂದಲೇ ನೋಡುವಂತಾಗಿದೆ, ಈ ವಿಚಾರದಲ್ಲಿ ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಂಡು ಸುಧಾರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.