Thursday, September 04, 2025
Menu

ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹಿಸಿ ಸ್ವಾಮೀಜಿಗಳಿಂದ ಸಚಿವ ಅಮಿತ್‌ ಶಾಗೆ ಮನವಿ

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್​​ಐಎಗೆ ವಹಿಸಬೇಕೆಂದು ಸ್ವಾಮೀಜಿಗಳ ನಿಯೋಗ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ನಾನೇ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಮಿತ್‌ ಶಾ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಚಿನ್ನಯ್ಯ ಮಾಡಿರುವ ಆರೋಪ ಸಂಬಂಧ ಎಲ್ಲ ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂಬ ಆಗ್ರಹ ಕೇಳಿಬರುತ್ತಿರುವಂತೆಯೇ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ನಿಯೋಗ ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಎನ್ಐಎ ತನಿಖೆಗೆ ವಹಿಸುವಂತೆ ಮನವಿ ಸಲ್ಲಿಸಿದೆ.

ಅಮಿತ್ ಶಾ ಅವರನ್ನು ದೆಹಲಿ ಕಚೇರಿಯಲ್ಲಿ ಭೇಟಿಯಾದ ಸ್ವಾಮೀಜಿಗಳು, ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವರ ಜೊತೆಗೆ ಚರ್ಚೆ ನಡೆಸಿ, ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ಮಾಹಿತಿ ನೀಡಿದರು.
ಧರ್ಮ ಕ್ಷೇತ್ರಗಳ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರುತ್ತೇವೆ ಎಂದು ಶಾ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್​​ಗಳಿಗೆ ವಿದೇಶಗಳಿಂದ ಹಣಕಾಸು ನೆರವು ಹರಿದು ಬಂದಿದೆ ಎಂಬ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದೆ. ಯೂಟ್ಯೂಬರ್ ಅಭಿಷೇಕ್​​ಎಂಬಾತನನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ದಾಖಲಾಗುವ ಮೊದಲೇ ವಿಡಿಯೋಗಳನ್ನು ಮಾಡಿದ್ದ ಅಭಿಷೇಕ್, ಅದಕ್ಕೂ 6 ತಿಂಗಳ ಹಿಂದೆ ಗಿರೀಶ್ ಮಟ್ಟಣ್ಣವರ್‌ನ್ನು ಸಂಪರ್ಕಿಸಿರುವುದು ತಿಳಿದು ಬಂದಿದೆ.

ಲೈಕ್ಸ್ ಹಾಗೂ ವ್ಯೂಗಾಗಿ ವೀಡಿಯೊ ಮಾಡಿದ್ದೆ ಎಂದು ಎಸ್​ಐಟಿ ವಿಚಾರಣೆ ವೇಳೆ ಯೂಟ್ಯೂಬರ್ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಯೂಟ್ಯೂಬರ್​​​ಗಳಿಗೆ ಎಸ್​ಐಟಿ ನೋಟಿಸ್ ನೀಡಲಿದೆ. ಚಿನ್ನಯ್ಯನ ಎಸ್​ಐಟಿ ವಿಚಾರಣೆ ಮುಂದುವರಿದಿದೆ. 12 ದಿನದ ಕಸ್ಟಡಿ ಮುಗಿದು ಆತನನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಮತ್ತೆ ಮೂರು ದಿನ ಎಸ್‌ಐಟಿ ವಶಕ್ಕೆ ನೀಡಿದೆ. ಸೆಪ್ಟೆಂಬರ್ 6 ರಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲು ಸೂಚಿಸಿದೆ.

Related Posts

Leave a Reply

Your email address will not be published. Required fields are marked *