ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟದಲ್ಲಿ ಸ್ವದೇಶಿ ಆಂದೋಲನ ಬ್ರಿಟೀಷರನ್ನು ಓಡಿಸಲು ದೊಡ್ಡ ಕೆಲಸ ಮಾಡಿದೆ. ಈಗ ಆಧುನಿಕ ಜಗತ್ತಿನಲ್ಲಿ ನಮ್ಮ ಭಾರತದ ಆರ್ಥಿಕ ಸ್ವಾತಂತ್ರ್ಯ, ಸಾರ್ವಭೌಮತ್ತ ಮತ್ತು ನಮ್ಮತನ ಉಳಿಸಿಕೊಳ್ಳಲು ಮತ್ತೆ ಸ್ವದೇಶಿ ಆಂದೋಲನ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಇಂದು ಚಿತ್ರದುರ್ಗದಲ್ಲಿ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಏರ್ಪಡಿಸಿರುವ ಸ್ವದೇಶಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಸ್ವದೇಶಿ ಮೇಳ ಎಲ್ಲಿ ಹೋದರೂ ಯಶಸ್ವಿಯಾಗುತ್ತದೆ. ಅದಕ್ಕೆ ಪ್ರತಿಯೊಬ್ಬ ಭಾರತೀಯನಲ್ಲಿ ಸ್ವದೇಶಿ ಭಾವನೆ ಇದೆ. ಅದಕ್ಕೆ ಪೂರಕವಾಗಿರುವ ವಾತಾವರಣ ನಿರ್ಮಾಣ ಮಾಡಬೇಕಿರುವುದು ಸರ್ಕಾರ, ಸಮಾಜದ ಕರ್ತವ್ಯ ನಮ್ಮ ದೇಶವನ್ನು ಸ್ವಾವಲಂಬನೆ ದೇಶವನ್ನು ಮಾಡಿದವರು ರೈತರು. ಒಂದು ಕಾಲದಲ್ಲಿ ಆಹಾರಕ್ಕಾಗಿ ನಾವು ವಿದೇಶದ ಮುಂದೆ ಕೈಯೊಡ್ಡಬೇಕಿತ್ತು. ರೈತರಿಗೆ ನಮ್ಮ ಮೊದಲನೆ ನಮಸ್ಕಾರ ಹೇಳಬೇಕು. ಯಾವ ದೇಶ ಸ್ವಾವಲಂಬನೆ ಆಗುತ್ತದೆ ಆ ದೇಶ ಸ್ಥಾಭಿಮಾನ ಆಗುತ್ತದೆ. ನಮ್ಮ ದೇಶದ ಜನರಲ್ಲಿ ವ್ಯಾಪಾರ ಮಾಡುವ ಮನೋಭಾವನೆ ನೂರಾರು ವರ್ಷಗಳಿಂದ ಇದೆ. ಒಂದೂರಿಂದ ಮತ್ತೊಂದು ಊರಿಗೆ ಹೋಗಿ ವ್ಯಾಪಾರ ಮಾಡುವ ಪ್ರವೃತ್ತಿ ಇದೆ. ಇದು ಸ್ವದೇಶಿ ಸ್ವಾಭಿಮಾನ ಎತ್ತಿ ಹಿಡಿಯಲು ಸಾಧ್ಯವಾಗಿದೆ ಎಂದು ಹೇಳಿದರು.
ಅಂತಃಕರಣ ಮರೆತಿದ್ದೇವೆ
ಉದಾರಿಕರಣ, ಖಾಸಗೀಕರಣ, ಜಾಗತೀಕರಣದ ನಡುವೆ ಅಂತಕರಣವನ್ನು ನಾವು ಮರೆತಿದ್ದೇವೆ. ನಮ್ಮ ಪ್ರತಿಯೊಂದು ಕ್ರಿಯಾಶೀಲ ಚಟುವಟಿಕೆಗಳು ಅಂತಕರಣದಿಂದ ಮಾನವೀಯತೆಯಿಂದ ಕೂಡಿದರೆ ಈ ದೇಶ ಜನರ ಬದುಕಿನ ಬಗ್ಗೆ ಚಿಂತನೆ ಮಾಡಲು ಸಾಧ್ಯ. ಕೇವಲ ವ್ಯಾಪಾರಕ್ಕಾಗಿ ಮಾಡಿದರೆ ಯಾವ ದೇಶವೂ ಉದ್ಧಾರ ಆಗುವುದಿಲ್ಲ. ಭಾರತದಲ್ಲಿ ಮೂಲದಲ್ಲಿ ಜ್ಞಾನ ಇದೆ. ಜ್ಞಾನದಿಂದ ವಿಜ್ಞಾನ. ವಿಜ್ಞಾನದಿಂದ ತಂತಜ್ಞಾನ, ತಂತ್ರಜ್ಞಾನದಿಂದ ಎಐ ಬಂದಿದೆ. ಟ್ರಂಪ್ ಯಾಕೆ ಈಗ ಭಾರತದ ಮೇಲೆ ಕಣ್ಣಿಟ್ಟಿದ್ದಾರೆ ಎಂದರೆ, ಹೊಸ ತಂತ್ರಜ್ಞಾನ ಬಳಸುವ ಶಕ್ತಿ ಭಾರತದಲ್ಲಿದೆ. ವಿಶೇಷವಾಗಿ ಕೃಷಿ ಮೇಲೆ ಅವರಿಗೆ ಕಣ್ಣಿದೆ. ಆಹಾರ ಉತ್ಪಾದನೆಯಲ್ಲಿ ಭಾರತ ನಂಬರ್ ಒನ್ ಇದೆ. ಇದು ನಮ್ಮ ರೈತರ ಕೊಡುಗೆ ಆದ್ದರಿಂದ ವಿದ್ಯಾವಂತ ಯುವಕರ ಕೆಲಸ ಭಾರತದಲ್ಲಿ ಭಾರತೀಯ ವಸ್ತುಗಳನ್ನು ಉತ್ಪಾದಿಸಿ ವಿದೇಶದಲ್ಲಿಯೂ ವ್ಯಾಪಾರ ಮಾಡಲು ಪಾರಂಭ ಮಾಡಬೇಕು. ಆಗ ಸ್ವದೇಶಿ ಚಳುವಳಿ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಬ್ರಿಟೀಷರು ನಿಜವಾಗಲು ನಮ್ಮನ್ನು ಬಿಟ್ಟು ಹೋಗಲು ಕಾರಣ ರೈತರು ಮತ್ತು ಕೂಲಿ ಕಾರ್ಮಿಕರು ತಿರುಗಿ ಬಿದ್ದಿದ್ದು. ಬಾರ್ಡೋಲಿ ಸತ್ಯಾಗ್ರಹದಲ್ಲಿ ನಾಲ್ಕು ನೂರು ದಿನ ರೈತರು ತಿರುಗಿ ಬಿದ್ದಾಗ ಯಾರ ಮಾತೂ ಕೇಳಲಿಲ್ಲ. ಚಂಪಾರಣ್ಯದಲ್ಲಿ ಕೂಲಿ ಕಾರ್ಮಿಕರು ತಿರುಗಿ ಬಿದ್ದರು ಆಗ ಬಿಟೀಷರು ಇನ್ನು ಭಾರತದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಭಾವಿಸಿದರು. ಮುಂದೆ 1908 ರಲ್ಲಿ ಕಬ್ಬಿಣದ ಉತ್ಪನ್ನ ಮಾಡಲು ಟಾಟಾ ಕಂಪನಿ ಆರಂಭವಾಯಿತು. ಯಾವಾಗ ನಮ್ಮ ವಸ್ತು ನಾವೇ ತಯಾರಿ ಮಾಡಿಕೊಂಡೆವು ಆಗ ಬ್ರಿಟೀಷರು ಹೋದರು.
ಸ್ವದೇಶಿ ಆಂದೋಲನ ಬ್ರಿಟೀಷರನ್ನು ಓಡಿಸಲು ದೊಡ್ಡ ಕೆಲಸ ಮಾಡಿದೆ. ಈಗ ಆಧುನಿಕ ಜಗತ್ತಿನಲ್ಲಿ ನಮ್ಮ ಭಾರತದ ಆರ್ಥಿಕ ಸ್ವಾತಂತ್ರ್ಯ ಸಾರ್ವಭೌಮತ್ತ ಮತ್ತು ನಮ್ಮತನ ಉಳಿಸಿಕೊಳ್ಳಲು ಮತ್ತೆ ಸ್ವದೇಶಿ ಆಂದೋಲನ ಆಗಬೇಕಿದೆ. ಗಾಂಧಿಜಿಯವರು ವಿದೇಶಿ ವಸ್ತುಗಳನ್ನು ಸುಡುವ ಮೂಲಕ ಸ್ವದೇಶಿ ಆಂದಲೋನ ಮಾಡಿದರು. ಕೆಲವು ಬಾರಿ ನಮ್ಮದೇ ಆದ ಆಡಳಿತ ವ್ಯವಸ್ಥೆ ಕೇಂದ್ರ ಹಾಗೂ ರಾಜ್ಯದಲ್ಲಿ ಇದ್ದಾಗಲೂ ಹೊಂದಾಣಿಕೆ ಆಗಿರುವುದು ನಡೆದಿದೆ. ಅವರ ವಿಚಾರ, ವೈಚಾರಿಕತೆಯಲ್ಲಿ ಹೊಂದಾಣಿಕೆ ಆಗಿದ್ದರು. ಇವತ್ತು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳ ಯಶಸ್ವಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಗಿಗೆರೆ ಬೃಹನ್ಮಠದ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಾಹಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹಾಗೂ ಪ್ರೊ. ಬಿ.ಎಂ. ಕುಮಾರಸ್ವಾಮಿ ಹಾಜರಿದ್ದರು.


