Menu

ಜ.15ರಿಂದ ಸುತ್ತ ಬನ್ನಿ ಸುತ್ತೂರು ಜಾತ್ರೆ

suttur jatre

ಸುತ್ತೂರು: ಹತ್ತೂರ ಜಾತ್ರೆಗೆ ಸುತ್ತೂರ ಜಾತ್ರೆ ಮೇಲೂ ಎಂಬ ಜನಪದ ಮಾತಿನಂತೆ ಜ.15ರಿಂದ ಈ ಬಾರಿಯ ಸುತ್ತೂರು ಜಾತ್ರೆ ಸಕಲ ರೀತಿಯಲ್ಲಿಯೂ ಹಲವು ವೈವಿದ್ಯಗಳೊಂದಿಗೆ ಸಿದ್ಧಗೊಂಡಿದೆ.

ಈ ಕುರಿತು ಸುತ್ತೂರು ಗದ್ದಿಗೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ನಂಜನಗೂಡಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜ.15ರಿಂದ 20ರವರೆಗೆ ಶ್ರೀಕ್ಷೇತ್ರ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ. ಐದು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಮೇಳೈಸಲಿವೆ.

ಎಂದು ಎನೇನೂ: ಜ.16ರಂದು ಸಾಮೂಹಿಕ ವಿವಾಹ ಮತ್ತು ಹಾಲ್ಟರವಿ ಉತ್ಸವ, 17ರಂದು ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, 18ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷದೀಪೋತ್ಸವ, 19ರಂದು ತೆಪ್ಪೋತ್ಸವ ಹಾಗೂ 20ರಂದು ಅನ್ನಬ್ರಹ್ಮೋತ್ಸವ ನಡೆಯಲಿವೆ. ಇವುಗಳೊಟ್ಟಿಗೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.

ಜ.15 ಗುರುವಾರದಂದು ಗ್ರಾಮೀಣ ಕಲೆ ರಂಗೋಲಿ ಸ್ಪರ್ಧೆ, 15 ಮತ್ತು 16ರಿಂದ ಮೂರು ದಿನ ಸೋಬಾನೆಪದ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ವಿಶೇಷವಾಗಿ ಜ. 18ರಂದು ರಾಗಿ ಬೀಸುವ ಸ್ಪರ್ಧೆ ಏರ್ಪಡಿಸಲಾಗಿದೆ.

ರಾಜ್ಯಮಟ್ಟದ ಭಜನಾ ಮೇಳ:

32ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ನಡೆಯಲಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 750ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸಲಿವೆ. ಒಟ್ಟು ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನವಿರಲಿದೆ.

ಕಿಡ್ನಿ‌ಮೂತ್ರ ಪಿಂಡದ ಪೂರ್ಣ ಮಾಹಿತಿ :

ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರಲಿದೆ. ಈ ವರ್ಷ ವಿಶೇಷಾವಾಗಿ ಕೃತಕ ಬುದ್ಧಿಮತ್ತೆ ಕುರಿತು ಮಾಹಿತಿ ನೀಡಲಾಗುವುದು, ಅದರಲ್ಲೂ ಕಿಡ್ನಿ, ಮೂತ್ರ ಪಿಂಡ ಕುರಿತು ಪೂರ್ಣ ಮಾಹಿತಿ ನೀಡಲಿದ್ದಾರೆ. 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿ, ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನವೂ ಇರುತ್ತದೆ.

ಉದ್ಯಮವಾಗಿ ಕೃಷಿ:

ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಕೃಷಿ ವಿಜ್ಞಾನ ಕೇಂದ್ರ ಸಂಶೋಧನೆ ಆಧಾರಿತ ಜ್ಞಾನ ಮತ್ತು ಸಲಹೆ ನೀಡುತ್ತದೆ. ಜೆಎಸ್‌ಎಸ್-ಸ್ಟೆಪ್ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪರಿಣತಿಯನ್ನು ಹಂಚಿಕೊಳ್ಳುತ್ತದೆ. ಮೇಳದ ಅವಧಿಯಲ್ಲಿ ಸಂವಾದಾತ್ಮಕ ಸತ್ರಗಳು, ಉತ್ಪನ್ನ ಪ್ರದರ್ಶನಗಳು ಏರ್ಪಡಿಸಲಿದ್ದು, ತಜ್ಞರು, ವಿಜ್ಞಾನಿಗಳು, ಸ್ಟಾರ್ಟ್ ಅಪ್ ಸಂಸ್ಥೆಗಳ ಸ್ಥಾಪಕರು. ಸರ್ಕಾರಿ ಅಧಿಕಾರಿಗಳು ಮತ್ತು ಕೈಗಾರಿಕಾ ವ್ಯಾಪಾರಿಗಳು ತಮ್ಮ ಅನುಭವ ಮತ್ತು ಜ್ಞಾನ ಹಂಚಿಕೊಂಡು ಕೃಷಿ ಉದ್ಯಮ ಉತ್ತೇಜಿಸುವರು.

ಸಾಂಪ್ರಾದಾಯಿಕ ಬೆಳಗಳ ಅರಿವು :

ಕೃಷಿ ಕ್ಷೇತ್ರದಲ್ಲಿನ ಪ್ರಮುಖ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲು ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳನ್ನು ಹಮ್ಮಿಕೊಳ್ಳಲಾಗಿದೆ. 2026 ಅಂತಾರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಘೋಷಣೆ ಮಾಡಿರುವುದರ ಪ್ರಯುಕ್ತ ‘ಮುಂದಿನ ಪೀಳಿಗೆಯ ಕೃಷಿಯಲ್ಲಿ ಮಹಿಳೆಯ ಪಾತ್ರ’ ಶೀರ್ಷಿಕೆಯಡಿ ಈ ವರ್ಷ ಕೃಷಿಮೇಳವನ್ನು ಆಯೋಜಿಸಲಾಗುತ್ತಿದೆ.

ಮೈಸೂರಿನ ಪ್ರಾದೇಶಿಕ ಬೆಳೆಗಾಳದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ ಹಾಗೂ ಈರನಗೆರೆ ಬದನೆ ಬೆಳೆಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಬಳ್ಳಿ, ಸಸಿಗಳ ಲೋಕ, ಕಸಿ ಟಮ್ಯಾಟೋ, ಬದನೆ ಬೆಳೆ ಹಾಗೂ ವೈವಿಧ್ಯಮಯ ಪುಪ್ಪ ಪ್ರದರ್ಶನವನ್ನು ಪ್ರಾತ್ಯಕ್ಷಿಕೆ ಸಹಿತ ಏರ್ಪಡಿಸಿದೆ.

ಒಂದು ಎಕರೆ ‘ಕೃಷಿ ಬ್ರಹ್ಮಾಂಡ’, ನೆರಳುಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿ, ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆ ವಿವಿಧ ಫಲಪುಷ್ಪ, ತೋಟಗಾರಿಕೆ ಬೆಳೆಗಳು, ರೇಷ್ಮೆಕೃಷಿ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕೃಷಿ ಅಭಿವೃದ್ಧಿ ಇಲಾಖೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ದೇಸಿ ತಳಿಗಳ ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕೃಷಿ ವಿಚಾರಸಂಕಿರಣ: ಜ.18 ಭಾನುವಾರ “ಕೃಷಿಯಲ್ಲಿ ಮಹಿಳೆ : ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ” ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದೆ. ಮಹಿಳೆಯರಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.

130ಕ್ಕೂ ಹೆಚ್ಚು ಜೋಡಿ ಸಾಮೂಹಿಕ ವಿವಾಹ :
ಜ.16 ಶುಕ್ರವಾರ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿಗಳವರು, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು-ವರರು ಸಹ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 130ಮಂದಿ ನೊಂದಣಿ ಮಾಡಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ಕಲಾವೈಭವ:

ಜ.18ರ ಭಾನುವಾರ 1ರಿಂದ 10ನೇ ತರಗತಿಯ ಜೆಎಸ್ಎಸ್ ಸಂಸ್ಥೆಗಳ ಹಾಗೂ ಇತರೆ ಶಾಲೆಗಳ ವಿದ್ಯಾರ್ಥಿಗಳಿಗಾಗಿ ನಾಲ್ಕು ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯಗಳ ಕುರಿತು ಚಿತ್ರ ರಚಿಸುವ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿದೆ.
ರಾಜ್ಯ ಹಾಗೂ ಹೊರರಾಜ್ಯ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ಬಿಡಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಸುತ್ತೂರು ಕಿಶೋರ: ಜ.19ರ ಸೋಮವಾರ ರಾಷ್ಟ್ರಮಟ್ಟದ ನಾಡಕುಸ್ತಿ ಪಂದ್ಯ ನಡೆಯಲಿವೆ. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳಿರುತ್ತವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ‘ಸುತ್ತೂರು ಕೇಸರಿ’ ಪ್ರಶಸ್ತಿ ಹಾಗೂ ಸ್ಥಳೀಯ ಕುಸ್ತಿ ಸ್ಪರ್ಧೆ ವಿಜೇತರಿಗೆ ‘ಸುತ್ತೂರು ಕುಮಾರ’ ಪ್ರಶಸ್ತಿಗಳನ್ನು ನೀಡಲಾಗುವುದು. ಈ ವರ್ಷದಿಂದ ವಿಶೇಷವಾಗಿ ‘ಸುತ್ತೂರು ಕಿಶೋರ’ ಪ್ರಶಸ್ತಿಯನ್ನು ನಂಜನಗೂಡು ತಾಲ್ಲೂಕಿನವರಿಗೆ ಕೊಡಲಾಗುವುದು. ಸಾರ್ವಜನಿಕರ ಮನೋರಂಜನೆಗಾಗಿ ಜಾತ್ರೆಯ ಎಲ್ಲ ದಿನಗಳಲ್ಲಿ ದೋಣಿ ವಿಹಾರವನ್ನು ಏರ್ಪಡಿಸಲಾಗಿದೆ.

ಮಲ್ಲಕಂಬ ಪ್ರದರ್ಶನ :

ಸುತ್ತೂರಿನ ಉಚಿತ ವಸತಿ ಶಾಲೆಯ ಮಲ್ಲಕಂಬ ತಂಡದಿಂದ ನಿತ್ಯವು ಶಾಲಾ ಆವರಣದಲ್ಲಿ ಮಲ್ಲಕಂಬ ಪ್ರದರ್ಶನವಿರುತ್ತದೆ. ಮಲ್ಲಕಂಬದ ಮೇಲೆ ವಿವಿಧ ಯೋಗಾಸದ ಭಂಗಿಗಳ ಪ್ರದರ್ಶನ, ಹೆಣ್ಣು ಮಕ್ಕಳು ಹಗ್ಗದ ಮೇಲೆ ಕಸರತ್ತುಗಳನ್ನು ಪ್ರದರ್ಶನ ಮಾಡಲಿದ್ದಾರೆ. ಮಲ್ಲಕಂಬ ಪಟು ಪಿರಮಿಡ್ ನಿರ್ಮಿಸಿ ನೋಡುಗರನ್ನು ಅಚ್ಚರಿಗೊಳಿಸುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕಗಳಿರುತ್ತವೆ. ಗ್ರಾಮಾಂತರ ಪ್ರದೇಶದ ನಾಟಕ ತಂಡಗಳಿಂದ ಇಪ್ಪತ್ತಕ್ಕೂ ಹೆಚ್ಚು ಪೌರಾಣಿಕ ನಾಟಕಗಳು ಪ್ರತಿದಿನ ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ವಸ್ತುಪ್ರದರ್ಶನ ಆವರಣದಲ್ಲಿ ಪ್ರತಿದಿನ ಸಂಜೆ 7ರಿಂದ 9ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹೊರಗಿನ ಕಲಾವಿದರು ನೀಡುತ್ತಾರೆ.

Related Posts

Leave a Reply

Your email address will not be published. Required fields are marked *