Menu

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಶಂಕಾಸ್ಪದ ಅಸ್ಥಿಪಂಜರ ಪತ್ತೆ

ಬೆಂಗಳೂರು: ಕೊತ್ತನೂರು ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೊತ್ತನೂರು ಬಳಿಯ ಸಮೃದ್ಧಿ ಅಪಾರ್ಟ್ ಮೆಂಟ್‌ನಲ್ಲಿ ಸುಮಾರು 6ರಿಂದ 8 ತಿಂಗಳ ಹಿಂದೆ ಮೃತಪಟ್ಟಿರಬಹುದಾದ ವ್ಯಕ್ತಿಯ ಅಸ್ಥಿಪಂಜರವು ಗುರುವಾರ ಸಂಜೆ ಕಟ್ಟಡ ಕಾರ್ಮಿಕರಿಗೆ ಕಾಣಿಸಿದೆ.

ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊತ್ತನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ.

ದೊಡ್ಡಗುಬ್ಬಿಯ ಶ್ರೀಧರ್ ಗೆ ಸೇರಿದ ಅಪಾರ್ಟ್‌ಮೆಂಟ್ ನಿರ್ಮಾಣದ ಬಗ್ಗೆ ಹತ್ತು ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಆದ್ದರಿಂದ ಅಪಾರ್ಟ್‌ಮೆಂಟ್ ಕಾಮಗಾರಿ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ವ್ಯಾಜ್ಯ ಬಗೆಹರಿದ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಕಟ್ಟಡ ಶುಚಿಗೊಳಿಸುವ ಕೆಲಸವನ್ನು ಆರಂಭಿಸಲಾಗಿತ್ತು.

ಗುರುವಾರ ಸಂಜೆ ಕಟ್ಟಡದ ನಾಲ್ಕನೇ ಮಹಡಿಯನ್ನು ಶುಚಿಗೊಳಿಸುತ್ತಿದ್ದ ಕಾರ್ಮಿಕರು ಅಸ್ಥಿಪಂಜರವನ್ನು ಗಮನಿಸಿದ್ದಾರೆ. ಕೂಡಲೇ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಕೊತ್ತನೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಕೊತ್ತನೂರು ಠಾಣೆ ಪೊಲೀಸರು, ಸೋಕೋ ಟೀಂ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದ್ದಾರೆ.

ಜೀನ್ಸ್ ಹಾಗೂ ಶರ್ಟ್ ಧರಿಸಿ ಮಲಗಿದ ಸ್ಥಿತಿಯಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದ್ದು, ಮೇಲ್ನೋಟಕ್ಕೆ‌ ಸುಮಾರು 35 ರಿಂದ 40 ವರ್ಷದ ಪುರುಷನದ್ದು ಎಂದು ಶಂಕಿಸಲಾಗಿದೆ, ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *