ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದಲ್ಲಿ ಪ್ರೀತಿಸಿ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದ ೨೪ ವರ್ಷದ ಮಹಿಳೆ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿ ಹಾಗೂ ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಮೃತ ಮಹಿಳೆ ಸ್ಪಂದನಾ ಗುರುವಾರ ಭೀಮನ ಅಮಾವಾಸ್ಯೆ ಹಿನ್ನೆಲೆ ಪತಿ ಅಭಿಷೇಕ್‌ಗೆ ಪೂಜೆ ಮಾಡಿದ್ದರು. ಆಕೆ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಅಭಿಷೇಕ್ ಎಂಬಾತನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾದ ಬಳಿಕ ಪತಿ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಬಗ್ಗೆ ಸ್ಪಂದನಾ ತಂದೆ ಬಳಿ ಹೇಳಿಕೊಂಡಿದ್ದಳು. 5 ಲಕ್ಷ ರೂ. ತಂದೆ ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರು.
ಅತ್ತೆ ಮಾತು ಕೇಳಿ ಗಂಡ ಕಿರುಕುಳ ಕೊಡುತ್ತಿರುವುದಾಗಿ ಸ್ಪಂದನಾ ಬುಧವಾರ ತಂದೆಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಆಕೆಯ ಗಂಡನ ಮನೆಯವರು ನಿಮ್ಮ ಮಗಳು ಮೃತಪಟ್ಟಿದ್ದಾಳೆ ತಿಳಿಸಿದ್ದರು. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ಖಚಿತವಾಗಿದೆ. ಪತಿ ಹಾಗೂ ಅತ್ತೆ ಲಕ್ಷ್ಮಮ್ಮ ಮಗಳಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಸ್ಪಂದನಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಪಂದನಾರ ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.