ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ ಎಲ್ಲಾ ಏಳು ಮಂದಿಯನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಾಲೆಗಾಂವ್ ನಗರದಲ್ಲಿ 17 ವರ್ಷಗಳ ಹಿಂದೆ ನಡೆದ, ಬಾಂಬ್ ಸ್ಫೋಟದ ಪ್ರಕರಣದಲ್ಲಿ ಕೇವಲ ಅನಮಾನ ಮಾತ್ರವಿದ್ದರೆ ಸಾಲದು ಸಾಕ್ಷ್ಯಗಳು ಬೇಕು ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.
ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (55) ಮತ್ತು ಸೇವೆ ಸಲ್ಲಿಸುತ್ತಿರುವ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (53) ಸೇರಿದಂತೆ ಹಲವು ಆರೋಪಿಗಳ ಹೆಸರು ಈ ಪ್ರಕರಣದಲ್ಲಿತ್ತು. ಎಲ್ಲಾ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ 29, 2008 ರಂದು ರಂಜಾನ್ ತಿಂಗಳಿನಲ್ಲಿ ಮಾಲೆಗಾಂವ್ನ ಮುಸ್ಲಿಂ ಏರಿಯಾದಲ್ಲಿ ಈ ಪ್ರಕರಣ ಸಂಭವಿಸಿತ್ತು.
2008 ರ ಮಾಲೆಗಾಂವ್ ಸ್ಫೋಟದಲ್ಲಿ ನ್ಯಾಯಾಲಯದ ತೀರ್ಪು ಗುರುವಾರ ಬಂದಿದೆ. ಎನ್ಐಎ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.ಇದರಲ್ಲಿ ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ 7 ಜನರು ಸೇರಿದ್ದಾರೆ. 2008 ರ ಮಾಲೆಗಾಂವ್ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸಾಧ್ವಿ ಪ್ರಜ್ಞಾ ಸಿಂಗ್ ಅವರಲ್ಲದೆ, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಯುಎಪಿಎ ಅಂದರೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಈ ಪ್ರಕರಣದ ಇತರ ಆರೋಪಿಗಳು.
ವಿಶೇಷವೆಂದರೆ ಮಾಲೆಗಾಂವ್ ಸ್ಫೋಟದ ತನಿಖೆಯನ್ನು ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ ವಹಿಸಲಾಗಿತ್ತು, ಆದರೆ ನಂತರ ಅದನ್ನು ಎನ್ಐಎ ಅಂದರೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಸ್ಫೋಟಕ್ಕೆ ಬಳಸಲಾದ ವಾಹನವನ್ನು ಠಾಕೂರ್ ಒದಗಿಸಿದ್ದಾರೆ ಎಂದು ಎಟಿಎಸ್ ಆರೋಪಿಸಿತ್ತು.
ವಾಹನವನ್ನು ಠಾಕೂರ್ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಎಟಿಎಸ್ ಹೇಳಿದೆ. 2018 ರಲ್ಲಿ ಪ್ರಾರಂಭವಾದ ಈ ಘಟನೆಗೆ ಸಂಬಂಧಿಸಿದ ವಿಚಾರಣೆ ಏಪ್ರಿಲ್ 19, 2025 ರಂದು ಕೊನೆಗೊಂಡಿತು. ನ್ಯಾಯಾಲಯವು ಪ್ರಕರಣವನ್ನು ತೀರ್ಪಿಗಾಗಿ ಕಾಯ್ದಿರಿಸಿತ್ತು.
ಘಟನೆ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಾಲೆಗಾಂವ್ನ ಮುಸ್ಲಿಂ ಏರಿಯಾದಲ್ಲಿ ಮಸೀದಿಯ ಬಳಿ ಬೈಕ್ನಲ್ಲಿದ್ದ ಸ್ಫೋಟಕ ಸಾಧನವು ಸ್ಫೋಟಗೊಂಡಿತ್ತು, ಇದರ ಪರಿಣಾಮವಾಗಿ ಆರು ಜನರು ಸಾವನ್ನಪ್ಪಿದ್ದರು, ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಂಜಾನ್ ತಿಂಗಳಲ್ಲಿ ಸ್ಫೋಟ ಸಂಭವಿಸಿತ್ತು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಆರಂಭದಲ್ಲಿ ತನಿಖೆಯ ನೇತೃತ್ವ ವಹಿಸಿತ್ತು, ಮೋಟಾರ್ ಸೈಕಲ್ನ ಮಾಲೀಕತ್ವವನ್ನು ತ್ವರಿತವಾಗಿ ಪತ್ತೆಹಚ್ಚಿ, ಹಲವರನ್ನು ಬಂಧಿಸಲಾಗಿತ್ತು. 2011 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಂಡಾಗ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿತು.