Menu

ವೈಭವದ ದಾಖಲೆಯ ಶತಕದಲ್ಲಿ ರಾರಾಜಿಸಿದ ರಾಜಸ್ಥಾನ್: ಗುಜರಾತ್ ಗೆ ಆಘಾತ

vaibhav suryavamshi

ಜೈಪುರ: 14 ವರ್ಷದ ವೈಭವ್ ಸೂರ್ಯವಂಶಿ ಸಿಡಿಸಿದ ಐಪಿಎಲ್ ಇತಿಹಾಸದ ಎರಡನೇ ಅತ್ಯಂತ ವೇಗದ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 8 ವಿಕೆಟ್ ಗಳ ಮಹೋನ್ನತ ಜಯ ಸಾಧಿಸಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡರೆ, ಗುಜರಾತ್ ಟೈಟಾನ್ಸ್ ಆಘಾತ ಅನುಭವಿಸಿ ಮೂರನೇ ಸ್ಥಾನಕ್ಕೆ ಕುಸಿಯಿತು.

ಜೈಪುರದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 209 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 15.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ 10 ಪಂದ್ಯಗಳಲ್ಲಿ 3 ಜಯ ಹಾಗೂ 7 ಸೋಲಿನೊಂದಿಗೆ 6 ಅಂಕದೊಂದಿಗೆ 8ನೇ ಸ್ಥಾನ ಪಡೆದಿದ್ದೂ ಅಲ್ಲದೇ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿತು. ಗುಜರಾತ್ 9 ಪಂದ್ಯಗಳಲ್ಲಿ 6 ಜಯ ಹಾಗೂ 3 ಸೋಲಿನೊಂದಿಗೆ 12 ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿಯಿತು.

ಕಠಿಣ ಗುರಿಯನ್ನು ಗುಜರಾತ್ ಒಡ್ಡಿದಾಗ ಪೈಪೋಟಿಯ ಪಂದ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತ್ಯಂತ ವೇಗದ ಶತಕ ಸಿಡಿಸಿ ಸುಲಭ ಗೆಲುವು ತಂದುಕೊಟ್ಟರು. ಇದಕ್ಕೂ ಮುನ್ನ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿರುವುದು ಇದುವರೆಗೂ ದಾಖಲೆಯಾಗಿದೆ.

ವೈಭವ್ 35 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಅಂತಿಮವಾಗಿ 38 ಎಸೆತಗಳಲ್ಲಿ  ಬೌಂಡರಿ ಮತ್ತು 11 ಸಿಕ್ಸರ್ ನೊಂದಿಗೆ 101 ರನ್ ಬಾರಿಸಿ ಔಟಾದರು. ಅಲ್ಲದೇ ಮೊದಲ ವಿಕೆಟ್ ಗೆ ಯಶಸ್ವಿ ಜೈಸ್ವಾಲ್ ಜೊತೆ 166 ರನ್ ಜೊತೆಯಾಟ ನಿಭಾಯಿಸಿದರು. ಜೈಸ್ವಾಲ್ 40 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 70 ರನ್ ಬಾರಿಸಿ ಔಟಾಗದೇ ಉಳಿದರು. ನಾಯಕ ರಿಯಾನ್ ಪರಾಗ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 32 ರನ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.

ಗಿಲ್ ಮತ್ತು ಸಾಯಿ ಸುದರ್ಶನ್ (38) ಮೊದಲ ವಿಕೆಟ್ ಗೆ 93 ರನ್ ಜೊತೆಯಾಟ ನಿಭಾಯಿಸಿದರು. ಗಿಲ್ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 84 ರನ್ ಗಳಿಸಿದರು. ನಂತರ ಬಂದ ಬಟ್ಲರ್ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 50 ರನ್ ಗಳಿಸಿದರು.

Related Posts

Leave a Reply

Your email address will not be published. Required fields are marked *