Thursday, January 15, 2026
Menu

15 ನಿಮಿಷ ತಡವಾಗಿ ಗವಿಗಂಗಾಧರೇಶ್ವರ ದೇವಸ್ಥಾನದ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ!

gavigangadhareshwa tempel

ಸಂಕ್ರಾಂತಿಯಂದು ಬೆಂಗಳೂರಿನ ಖ್ಯಾತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪ್ರಕೃತಿ ವಿಸ್ಮಯ ಈ ಬಾರಿಯೂ ನೆರವೇರಿದ್ದು, ಶಿವಲಿಂಗವನ್ನು ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಸೂರ್ಯ ರಶ್ಮಿ ಸ್ಪರ್ಶಿಸಿದೆ.

ಪ್ರತಿ ವರ್ಷ ಸಂಕ್ರಾಂತಿಯಂದು ನಡೆಯುವ ಪ್ರಕೃತಿಯ ಈ ವಿಸ್ಮಯ ನೋಡಲು ಭಕ್ತ ಸಾಗರವೇ ಗಂಗಾಧರೇಶ್ವರನ ಸನ್ನಿಧಿಯಲ್ಲಿ ನೆರೆದಿರುತ್ತದೆ. ಈ ಸಂದರ್ಭದಲ್ಲಿ ಪ್ರಕೃತಿಯ ವಿಸ್ಮಯಕ್ಕೆ ಸನ್ನಿಧಾನ ಸಾಕ್ಷಿಯಾಗಿದೆ. ಗವಿಗಂಗಾಧರೇಶ್ವರನಿಗೆ ಸಂಜೆ 5 ಗಂಟೆ 2 ನಿಮಿಷಕ್ಕೆ ಸೂರ್ಯ ರಶ್ಮಿಯ ಸ್ಪರ್ಶವಾಗಬೇಕಿತ್ತು. ಆದರೆ 15 ನಿಮಿಷ ತಡವಾಗಿ ಅಂದರೆ 5 ಗಂಟೆ 17 ನಿಮಿಷದಿಂದ ಶಿವಲಿಂಗಕ್ಕೆ ಭಾಸ್ಕರನ ಸ್ಪರ್ಶ್ ಆರಂಭವಾಯಿತು.

ಮೊದಲು ದೇಗುಲದ ಹಂಸ ದ್ವಾರದ ಮೂಲಕ ನಂದಿಯನ್ನ ಸ್ಪರ್ಶಿಸಿದ ಭಾಸ್ಕರ ಬಳಿಕ ನಂದಿಯ ಕೊಂಬಿನ ಮೂಲಕ ಹಾದುಹೋಗಿ ಈಶ್ವರನ ಪೀಠ ಸ್ಪರ್ಶಿಸಿದ್ದಾನೆ, ನಂತರ ನಿಧಾನವಾಗಿ ಶಿವಲಿಂಗ ಸ್ಪರ್ಶಿಸಿದ್ದಾನೆ. ಈ ವಿಸ್ಮಯವನ್ನ ಭಕ್ತಗಣ ಕಣ್ತುಂಬಿಕೊಂಡಿದೆ. ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶಿಸುತ್ತಲೇ ಗಂಗಾಧರನಿಗೆ ದೀಪಾರಾಧನೆ ಪ್ರಾರಂಭವಾಯಿತು.

ಮೊದಲು ದೇವರ ಅಭಿಷೇಕಕ್ಕೆ ಪೂರ್ಣಕುಂಭ ಕಳಸದೊಂದಿಗೆ ದೇವಸ್ಥಾನಕ್ಕೆ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಆಗಮಿಸಿದರು. ಸೂರ್ಯ ರಶ್ಮಿ ಸ್ಪರ್ಶ ವೇಳೆ ಗವಿಗಂಗಾದರೇಶ್ವರನಿಗೆ ಪೂರ್ಣ ಕುಂಭ ಅಭಿಷೇಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯ ಪ್ರವೇಶ ಮಾಡಿದ ಸೂರ್ಯ ರಶ್ಮಿ ಮೊದಲು ನಂದಿಯನ್ನ ಸ್ಪರ್ಶಿಸಿದ. ದಕ್ಷಿಣಯಾನದಿಂದ ಉತ್ತರಾಯಣ ಪಥ ಬದಲಾವಣೆ ಮಾಡುತ್ತಿರೋ ಸೂರ್ಯ ಗರ್ಭ ಗುಡಿಯ ಮುಂಭಾಗದಲ್ಲಿರೋ ಸ್ಪಟಿಕ ಲಿಂಗಕ್ಕೆ ಸ್ಪರ್ಶಿಸಿ ನಂತರ ಶಿವಲಿಂಗ ಪೀಠದ ಸ್ಪರ್ಶ ಮಾಡಿದ.

ಬಳಿಕ ಸೂರ್ಯದೇವ ಈಶ್ವರನ ಪಾದ ಪೀಠ ಮಾಡಿದನು. ನಂತರ ಲಿಂಗದ ಮೇಲೆ 5:17 ರಿಂದ ಸುಮಾರು 6 ನಿಮಿಷಗಳ ಕಾಲ ಸೂರ್ಯರಶ್ಮಿ ಬಿದ್ದಿದ್ದು, ಬಳಿಕ ಉತ್ತರಾಯಣಕ್ಕೆ ಪಥ ಬದಲಾಯಿಸಿದ್ದಾನೆ.

ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ದೇವಸ್ಥಾನದ ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಟೆಂಟ್, ಶಾಮಿಯಾನದ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು.

Related Posts

Leave a Reply

Your email address will not be published. Required fields are marked *