2003ರಲ್ಲಿ ಸಂಚಲನ ಸೃಷ್ಟಿಸಿದ್ದ ಟೆಕ್ಕಿ ಗಿರೀಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಿಂಗ್ರೋಡ್ ಶುಭಾ ಸೇರಿ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಶ್ಚಿತಾರ್ಥ ಆಗಿದ್ದ ಟೆಕ್ಕಿ ಗಿರೀಶ್ನನ್ನು ಪ್ರಿಯಕರ ಮತ್ತು ಸ್ನೇಹಿತರೊಂದಿಗೆ ಸೇರಿ ಶುಭಾ ಕೊಲೆ ಮಾಡಿಸಿದ್ದಳು. ಆರೋಪಿಗಳಾದ ಶುಭಾ, ಅರುಣ್ ವರ್ಮ, ದಿನೇಶ್ ಹಾಗೂ ವೆಂಕಟೇಶ್ಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು.
2010ರಲ್ಲಿ ಸೆಷನ್ಸ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದು ಎಲ್ಲಾ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನಲ್ಲಿ 2014ರಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರು.
ಇದೀಗ ಸುಪ್ರೀಂ ಕೋರ್ಟ್ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಕಾಯಂಗೊಳಿಸಿದೆ. 8 ವಾರದಲ್ಲಿ ಶರಣಾಗತಿಗೆ ಸೂಚನೆ ನೀಡಿದೆ. ಕ್ಷಮದಾನ ಕೋರಿ 8 ವಾರದಲ್ಲಿ ರಾಜ್ಯಪಾಲರ ಮೊರೆ ಹೋಗಲು ಅವಕಾಶ ನೀಡಿದೆ. ರಾಜ್ಯಪಾಲರು ಕ್ಷಮದಾನ ಅರ್ಜಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಆರೋಪಿಗಳನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.