ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುವ ಬದಲು ಪರಾವಲಂಬಿ ವರ್ಗ ಸೃಷ್ಟಿ ಮಾಡುತ್ತಿದ್ದಿರಾ ಎಂದು ರಾಜಕೀಯ ಪಕ್ಷಗಳ ಉಚಿತ ಯೋಜನೆಗಳ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎಜಿ ಮಸಿಹ್ ಅವರನ್ನೊಳಗೊಂಡ ವಿಭಾಗೀಯ ಪೀಠ, ನಗರ ಪ್ರದೇಶಗಳಲ್ಲಿ ನಿರಾಶ್ರಿತ ವ್ಯಕ್ತಿಗಳ ಆಶ್ರಯ ಹಕ್ಕಿನ ವಿಚಾರಣೆ ವೇಳೆ ಬುಧವಾರ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿತು.
ಜನರು ಕೆಲಸ ಮಾಡುವುದು ನಿಮಗೆ ಇಷ್ಟವಿಲ್ಲವೇ? ಉದ್ಯೋಗಗಳನ್ನು ಸೃಷ್ಟಿ ಮಾಡಿ ಕೆಲಸ ಮಾಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿ ರಾಜಕೀಯ ಪಕ್ಷಗಳ ಮೇಲೆ ಇಲ್ಲವೇ ಎಂದು ಪೀಠ ಪ್ರಶ್ನಿಸಿತು.
ಮಹಾರಾಷ್ಟ್ರದ ‘ಲಡ್ಕಿ ಬೆಹೆನ್’ ಯೋಜನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ನ್ಯಾಯಮೂರ್ತಿ ಗವಾಯಿ, ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಕುಟುಂಬದ ಆದಾಯ ಹೊಂದಿರುವ 21-65 ವರ್ಷ ವಯಸ್ಸಿನ ಮಹಿಳೆಯರು ತಿಂಗಳಿಗೆ 1,500 ರೂ.ಗಳನ್ನು ಪಡೆಯುತ್ತಾರೆ ಎಂದರು.
ಇತರೆ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಇತರೆ ಪಕ್ಷಗಳು ಕೂಡಾ ಇದೇ ರೀತಿಯ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ್ದು, ’ದುರದೃಷ್ಟವಶಾತ್, ‘ಲಡ್ಕಿ ಬಹಿನ್’ ಮತ್ತು ಇತರ ಯೋಜನೆಗಳಂತೆ ಚುನಾವಣೆಗಳ ಹೊಸ್ತಿಲಲ್ಲಿ ಘೋಷಿಸಲಾದ ಈ ಉಚಿತ ಕೊಡುಗೆಗಳಿಂದಾಗಿ, ಜನರು ಕೆಲಸ ಮಾಡಲು ಸಿದ್ಧರಿಲ್ಲ. ಅವರು ಯಾವುದೇ ಕೆಲಸ ಮಾಡದೆ ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.