Tuesday, December 02, 2025
Menu

ಪೋಕ್ಸೋದಡಿ ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ ಪ್ರಕ್ರಿಯೆಗೆ ಸುಪ್ರೀಂ ತಡೆ: ಬಿಎಸ್‌ವೈ ಸದ್ಯಕ್ಕೆ ನಿರಾಳ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪೋಕ್ಸೋ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆದಿದ್ದು, ತ್ವರಿತಗತಿ ನ್ಯಾಯಾಲಯದ ಪ್ರಕ್ರಿಯೆಗೆ ಸರ್ವೋಚ್ಚ   ನ್ಯಾಯಾಲಯ ತಡೆ ನೀಡಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ನಲ್ಲಿ ಕೈಗೆತ್ತಿಕೊಳ್ಳಲಾಯಿತು. ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ನ್ಯಾಯಾಲಯದಲ್ಲಿ ಹಾಜರಿದ್ದರು. ವಿಚಾರಣೆ ನಡೆಯುತ್ತಿದಾಗ ವಕೀಲ ಸಿ.ವಿ. ನಾಗೇಶ್ ಅವರು, ತಮ್ಮ ಕಕ್ಷಿದಾರರಿಗೆ ನ್ಯಾಯಾಲಯದ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ನಲ್ಲಿ ತಡೆ ಸಿಕ್ಕಿರುವುದಾಗಿ ಹೇಳಿದರು.

ನ್ಯಾಯಾಲಯದ ಪ್ರಕ್ರಿಯೆಗೆ ತಡೆ ಸಿಕ್ಕಿದೆ ಎಂಬ ಮಾಹಿತಿ ಪಡೆದ ನ್ಯಾಯಾಧೀಶರು, ಈ ಕುರಿತು ಸೂಕ್ತ ದಾಖಲೆಗಳನ್ನು ನೀಡುವಂತೆ ಯಡಿಯೂರಪ್ಪ ಪರ ವಕೀಲರಿಗೆ ಸೂಚಿಸಿದರು. ಪ್ರತಿಕ್ರಿಯಿಸಿದ ವಕೀಲರು, ದಾಖಲೆಗಳ ಪ್ರತಿಯನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಯಡಿಯೂರಪ್ಪ ಪರವಾಗಿ ಸಲ್ಲಿಸಲಾದ ವಿನಾಯಿತಿ ಅರ್ಜಿ ಮತ್ತು ಸುಪ್ರೀಂ ಕೋರ್ಟ್‌ನ ತಡೆ ಆದೇಶದ ಕುರಿತು ವಿಶೇಷ ಸರ್ಕಾರಿ ಅಭಿಯೋಜಕರು ಅಶೋಕ್ ನಾಯಕ್ ಆಕ್ಷೇಪ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ನ ಆದೇಶದ ಅಧಿಕೃತ ಪ್ರತಿ ಹಾಜರಾದ ನಂತರದ ಪ್ರಕ್ರಿಯೆಗಳ ಬಗ್ಗೆ ನ್ಯಾಯಾಲಯವು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಸಮನ್ಸ್‌ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Related Posts

Leave a Reply

Your email address will not be published. Required fields are marked *