ಪ್ರಧಾನಮಂತ್ರಿಗಳ ಕಚೇರಿಯಿಂದ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಷ್ತಿ ಉರುಸ್ ವೇಳೆ ಚಾದರ್ ಸಮರ್ಪಣೆ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಲು ಕೋರಿ ಸಲ್ಲಿಕೆಯಾಗಿದ್ದ ತುರ್ತು ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ದರ್ಗಾವು ಪ್ರಾಚೀನ ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಸಲ್ಲಿಸಿರುವ ಮೊಕದ್ದಮೆ ಬಾಕಿ ಇರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಈ ನಿರ್ಧಾರ ಮಹತ್ವದ್ದಾಗಿದೆ. ಮುಖ್ಯ ನ್ಯಾಯಮೂರ್ತಿ ಪ್ರಕರಣ ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಇದು ಲಕ್ಷಾಂತರ ಭಕ್ತರಿಗೆ ಸಂಬಂಧಿಸಿದ ವಿಷಯವಾಗಿದೆ. ದರ್ಗಾಗೆ ಪ್ರಧಾನಿ ಕಚೇರಿಯಿಂದ ಚಾದರ್ ಅರ್ಪಣೆಯು ತಪ್ಪು ಸಂದೇಶ ರವಾನಿಸುತ್ತದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಅವರು, ಅಜ್ಮೀರ್ ದರ್ಗಾವು ಪ್ರಾಚೀನ ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಘೋಷಿಸುವಂತೆ ಕೋರಿ ರಾಜಸ್ಥಾನದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
ರಾಜಸ್ಥಾನ ನ್ಯಾಯಾಲಯವು ಕಳೆದ ವರ್ಷದ ಕೊನೆಯಲ್ಲಿ ದರ್ಗಾ ಸಮಿತಿ , ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಈ ಮೊಕದ್ದಮೆಯ ಕುರಿತು ನೋಟಿಸ್ ಜಾರಿ ಮಾಡಿತ್ತು. ದರ್ಗಾ ಆವರಣದಲ್ಲಿ ಶಿವ ದೇವಾಲಯದ ಅವಶೇಷಗಳ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳಲು ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಮೀಕ್ಷೆ ನಡೆಸಬೇಕೆಂದು ಮೊಕದ್ದಮೆಯಲ್ಲಿ ಕೋರಲಾಗಿತ್ತು. ದರ್ಗಾದ ವಾಸ್ತುಶಿಲ್ಪದ ವೈಶಿಷ್ಟ್ಯಗಳು ಮತ್ತು ಮೇಲ್ಛಾವಣಿ ವಿನ್ಯಾಸವು ದೇವಾಲಯವನ್ನು ಹೋಲುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.


