ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಇನ್ನು ಎರಡು ದಿನಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಿನಯ್ ಕುಲಕರ್ಣಿ ಶರಣಾಗುವ ಸಾಧ್ಯತೆ ಇದೆ.
ಶುಕ್ರವಾರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವಿನಯ್ ಕುಲಕರ್ಣಿ ಹಾಜರಾಗಲಿದ್ದಾರೆ. ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿರುವುದರಿಂದ ಸಿಬಿಐ ಅವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ.
ಕೊಲೆ ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸಿ, ಪ್ರಭಾವ ಬೀರಲು ಯತ್ನಿಸುವ ಮೂಲಕ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಕುಲಕರ್ಣಿ ಜಾಮೀನು ರದ್ದು ಪಡಿಸಿದೆ.ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಈ ಹಿಂದೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. 2021ರ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಸಿಬಿಐ ಈ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿನಯ್ ಕುಲಕರ್ಣಿ ಸಾಕ್ಷಿಗಳಿಗೆ 1 ಲಕ್ಷ ರೂಪಾಯಿ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿತ್ತು. ಜಾಮೀನು ರದ್ದುಪಡಿಸುವಂತೆ ಸಿಬಿಐ ಮನವಿ ಮಾಡಿತ್ತು.
2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೀಶ್ ಗೌಡ ಕೊಲೆ ನಡೆದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪ್ರಕರಣದಲ್ಲಿ 21 ಆರೋಪಿಗಳಿದ್ದಾರೆ. ಬಸವರಾಜ ಮುತ್ತಗಿ ಮೊದಲ ಆರೋಪಿ. ಶಿವಾನಂದ ಶ್ರೀಶೈಲ ಬಿರಾದಾರ 17ನೇ ಮತ್ತು ವಿನಯ್ ಕುಲಕರ್ಣಿ 15ನೇ ಆರೋಪಿ.