ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಇದರಿಂದ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಸದ್ಯಕ್ಕೆ ನಿರಾಳರಾಗಿದ್ದಾರೆ. ನಂಜೇಗೌಡ ವಿರುದ್ಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಮತಗಳ ಮರುಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿದೆ.
ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಅವರ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಮರು ಮತ ಎಣಿಕೆಗೆ ಸೂಚಿಸಿದೆ. ಮತಗಳ ಮರುಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ರಾಜ್ಯದ ಸಿಇಸಿಗೆ ಸೂಚನೆ ನೀಡಿದೆ.
ಶಾಸಕ ಕೆವೈ ನಂಜೇಗೌಡ ಆಯ್ಕೆ ಅಸಿಂಧು ಎಂದು ಸೆಪ್ಟೆಂಬರ್ 16 ರಂದು ತೀರ್ಪು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಿತ್ತು. ಮೇಲ್ಮನವಿ ಸಲ್ಲಿಸುವ ವರೆಗೆ ಆದೇಶವನ್ನು ತಟಸ್ಥವಾಗಿ ಇರಿಸುವಂತೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಮರು ಮತಎಣಿಕೆ ನಂತರ ನ್ಯಾಯಾಲಯದ ಅನುಮತಿಯಿಲ್ಲದೆ ಫಲಿತಾಂಶ ಘೋಷಿಸುವಂತಿಲ್ಲ. ಅಲ್ಲಿಯವರೆಗೆ ನಂಜೇಗೌಡ ಅವರ ಶಾಸಕ ಸ್ಥಾನ ಅಬಾಧಿತ ಎಂದು ಹೇಳಿದೆ.