ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ನೇಮಕ ಮಾಡಿದ್ದ 25 ಸಾವಿರ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿ ಕೋಲ್ಕತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟಾಗಿದೆ.
ಪಶ್ಚಿಮ ಬಂಗಾಳದ ಸ್ಕೂಲ್ ಸರ್ವಿಸ್ ಕಮಿಷನ್ ನೇಮಕ ಮಾಡಿದ್ದ 25 ಸಾವಿರ ಶಿಕ್ಷಕರು ಹಾಗೂ ಸಿಬ್ಬಂದಿ ನೇಮಕಾತಿಯನ್ನು ಕೋಲ್ಕತಾ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಶಿಕ್ಷಕರ ನೇಮಕಾತಿಯ ಇಡೀ ಪ್ರಕ್ರಿಯೆಯೇ ದಿಕ್ಕು ತಪ್ಪಿಸುವ ರೀತಿ ಇದ್ದು, ಇದು ವಂಚನೆಯಿಂದ ಕೂಡಿದೆ ಎಂದು ಹೇಳಿದೆ.
ಹೈಕೋರ್ಟ್ ಆದೇಶಕ್ಕೆ ಮಧ್ಯಪ್ರವೇಶಿಸುವ ಅಗತ್ಯ ನಮಗೆ ಕಾಣುತ್ತಿಲ್ಲ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಂಚನೆ ಮತ್ತು ಮೋಸದಿಂದ ಕೂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮೂರು ತಿಂಗಳಲ್ಲಿ ಹೊಸದಾಗಿ ಪ್ರಕ್ರಿಯೆ ಆರಂಭಿಸಿ ನೇಮಕಾತಿ ಮಾಡುವಂತೆ ಕೋರ್ಟ್ ಸೂಚಿಸಿದೆ.
ಹೊಸ ಪ್ರಕ್ರಿಯೆ ಮೂಲಕ ನೇಮಕಗೊಂಡ ಶಿಕ್ಷಕರು ತಮ್ಮ ವೇತನವನ್ನು ಹಿಂದೆ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಯಾರೂ ಅನರ್ಹರಾಗುತ್ತಾರೋ ಅವರು 2016ರಿಂದ ಸೇವೆ ಸಲ್ಲಿಸಿದ್ದಕ್ಕಾಗಿ ಪಡೆದ ವೇತನವನ್ನು ಮರು ಪಾವತಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.