Menu

ಮೈಸೂರು ಒಡೆಯರ್‌ ಕುಟುಂಬಕ್ಕೆ 3,400 ಕೋಟಿ ರೂ.ನೀಡಿ: ರಾಜ್ಯಕ್ಕೆ ಸುಪ್ರೀಂ ನಿರ್ದೇಶನ

ಬಳ್ಳಾರಿ ಮತ್ತು ಜಯಮಹಲ್‌ ರಸ್ತೆಗಳ ವಿಸ್ತರಣೆಗೆಂದು ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರಿನ ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ಒಂದು ವಾರ ದೊಳಗೆ 3,400 ಕೋಟಿ ರೂ. ಮೊತ್ತದ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು ಅರಮನೆ ಮೈದಾನ ಪ್ರದೇಶದ ಬಳಕೆ ಮತ್ತು ನಿಯಂತ್ರಣದ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಉದ್ದೇಶಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ.

ಮೈಸೂರು ರಾಜಮನೆತನದವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್‌ ಮತ್ತು ನ್ಯಾ.ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. ಸರ್ಕಾರ ಮತ್ತು ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಕಂಡು ಬರುತ್ತಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್‌, 1994ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಭೂ ಸ್ವಾಧೀನದ ಮೌಲ್ಯ ಮಾಪನವನ್ನು 2024ರ ಪ್ರಕಾರ ಮಾಡಲಾಗುತ್ತಿದೆ. ಪ್ರಸ್ತುತ ಈ ಟಿಡಿಆರ್ ಪ್ರಕಾರ 462 ಎಕರೆಗಳಷ್ಟು ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋದರೆ ರಾಜ್ಯದ ಬೊಕ್ಕಸಕ್ಕೆ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹೊರೆ ಬೀಳಲಿದೆ. ಈ ತನಕ ಬಳಕೆ ಮಾಡಿರುವ ಜಾಗಕ್ಕೆ ಪರಿಹಾರವಾಗಿ 49 ಕೋಟಿ ರೂ. ಠೇವಣಿ ಮಾಡಲಾಗಿದೆ. ಬಳಕೆ ಮಾಡದಿರುವ ಜಾಗಕ್ಕೂ ಪರಿಹಾರ ಕೊಡುವುದಾದರೆ 3,400 ಕೋಟಿ ರೂ. ನೀಡಬೇಕಾಗುತ್ತದೆ. ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ. ಸರ್ಕಾರ 15.7 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಿಲ್ಲ. ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಮೂಲ ಅರ್ಜಿ ಇತ್ಯರ್ಥವಾಗಬೇಕಿದೆ ಎಂದು ಪ್ರತಿವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಾರದೊಳಗೆ ಟಿಡಿಆರ್‌ ಹಣವನ್ನು ಡಿಪಾಸಿಟ್‌ ಮಾಡಿ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸಿ ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮಾರ್ಚ್‌ 20ಕ್ಕೆ ಮುಂದೂಡಿದೆ.  ಇದಕ್ಕೂ ಮೊದಲು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, 15.7 ಎಕರೆ ಜಾಗಕ್ಕೆ ಪರಿಹಾರವಾಗಿ ಟಿಡಿಆರ್‌ ₹3,400 ಕೋಟಿ ನೀಡಲು ಸೂಚಿಸಿತ್ತು. ಈ ಹೊರೆಯನ್ನು ತಪ್ಪಿಸಿಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ತಂದಿತ್ತು.

Related Posts

Leave a Reply

Your email address will not be published. Required fields are marked *