ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದನ್ನು ಖಂಡಿಸಿ ಹುದ್ದೆಗೆ ರಾಜೀನಾಮೆ ನೀಡಿದ್ದ ಬೆಂಬಲಿಗ ಸಂತೋಷ್ ತಟಗಾರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ ಅವರನ್ನು ಉಚ್ಛಾಟನೆ ಮಾಡಿ ಬುಧವಾರ ಆದೇಶ ಹೊರಡಿಸಿತ್ತು. ಅವರನ್ನು ಉಚ್ಚಾಟನೆ ಮಾಡುತ್ತಿದ್ದಂತೆ ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಸಂತೋಷ್ ತಟಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಗುರುವಾರ ಸಂತೋಪ್ ತಟಗಾರ ಪ್ರಯಾಣಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಸು ನೀಗಿದ್ದಾರೆ.
ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರಬಹುದು. ಜನರ ಮನಸ್ಸಿನಿಂದ ಉಚ್ಛಾಟನೆ ಮಾಡುವುದಕ್ಕೆ ಆಗದು. ವೇಟ್ ಆ್ಯಂಡ್ ಸಿ. ಬಿಜೆಪಿಗೆ ಭಾವಪೂರ್ವ ಶ್ರದ್ಧಾಂಜಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ತಟಗಾರ ಪೋಸ್ಟ್ ಹಂಚಿಕೊಂಡಿದ್ದರು. ಯತ್ನಾಳ್ ಉಚ್ಛಾಟನೆ ಖಂಡಿಸಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ರಾಜೀನಾಮೆ ಮುಂದುವರಿದಿದೆ.
ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು. ರಾಯಚೂರು, ಬಳ್ಳಾರಿ, ಕಲ್ಬುರ್ಗಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ. ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ ಎಂದಿದ್ದಾರೆ.