ಹೈದರಾಬಾದ್: ಮಧ್ಯಮ ವೇಗಿ ಮೊಹಮದ್ ಸಿರಾಜ್ ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ಗೆದ್ದು ಹ್ಯಾಟ್ರಿಕ್ ಸುಲಭ ಜಯ ಸಾಧಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ಸತತ ನಾಲ್ಕನೇ ಸೋಲಿನೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಗೆ 152 ರನ್ ಗಳಿಗೆ ಕಡಿವಾಣ ಹಾಕಿದ ಗುಜರಾತ್ ಟೈಟಾನ್ಸ್ ತಂಡ 16.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸನ್ ರೈಸರ್ಸ್ ಹೈದರಾಬಾದ್ ತವರಿನಲ್ಲಿ ಅನುಭವಿಸಿದ ಸೋಲಿನ ಜೊತೆಗೆ ಇದು ಸತತ 4 ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ಗುಜರಾತ್ ಟೈಟಾನ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ 2ನೇ ಸ್ಥಾನಕ್ಕೆ ಜಿಗಿಯಿತು.
ಸಾಧಾರಣ ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ 16 ರನ್ ಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ನಾಯಕ ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಮೂರನೇ ವಿಕೆಟ್ ಗೆ 90 ರನ್ ಜೊತೆಯಾಟದಿಂದ ಗೆಲುವು ಖಚಿತಪಡಿಸಿದರು.
ಗಿಲ್ 43 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 61 ರನ್ ಬಾರಿಸಿ ಔಟಾಗದೇ ಉಳಿದರೆ, ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ49 ರನ್ ಬಾರಿಸಿದ್ದಾಗ ಔಟಾಗಿ 1 ರನ್ ನಿಂದ ಅರ್ಧಶತಕ ವಂಚಿತರಾದರು. ಇಂಪ್ಯಾಕ್ಟ್ ಪ್ಲಾಯೆರ್ ಆಗಿ ಕಣಕ್ಕೆ ಇಳಿದ ಶೆರ್ಫಾನಿ ರುದರ್ಫೋಡ್ 16 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 35 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊಹಮದ್ ಸಿರಾಜ್ ದಾಳಿಗೆ ನಲುಗಿ ಹೋಯಿತು. ಒಬ್ಬನೇ ಒಬ್ಬ ಬ್ಯಾಟ್ಸ್ ಮನ್ ಅರ್ಧಶತಕ ದಾಖಲಿಸಲಿಲ್ಲ. ಸಿರಾಜ್ ಜೀವನಶ್ರೇಷ್ಠ ದಾಳಿ ನಡೆಸಿ 4 ವಿಕೆಟ್ ಪಡೆದು ಮಿಂಚಿದರು.
ನಿತಿಶ್ ಕುಮಾರ್ ರೆಡ್ಡಿ (31), ಹೆನ್ರಿಚ್ ಕ್ಲಾಸೆನ್ (27), ಪ್ಯಾಟ್ ಕಮಿನ್ಸ್ (22) ಮತ್ತು ಇಶಾನ್ ಕಿಶನ್ (17) ತಕ್ಕಮಟ್ಟಿಗೆ ಪ್ರದರ್ಶನ ನೀಡಿ ತಂಡ ಸಾಧಾರಣ ಮೊತ್ತ ದಾಖಲಿಸಲು ನೆರವಾದರು.