Wednesday, January 21, 2026
Menu

ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಸೇವೆಯಿಂದ ನಿವೃತ್ತಿ

sunita

ಗಗನಯಾತ್ರಿ ಸುನೀತಾ ವಿಲಿಯಮ್ಸ್ ವೃತ್ತಿಜೀವನದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಯಾತ್ರೆಗಳನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದು, 27 ವರ್ಷಗಳ ಸುದೀರ್ಘ ಸೇವೆ ಬಳಿಕ ನಾಸಾದಿಂದ ನಿವೃತ್ತರಾಗಿದ್ದಾರೆ ಎಂದು ನಾಸಾ ಅಧಿಕೃತವಾಗಿ ಘೋಷಿಸಿದೆ. ಅವರ ನಿವೃತ್ತಿ 2025ರ ಡಿಸೆಂಬರ್ 27ರಿಂದ ಜಾರಿಯಾಗುತ್ತಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

60 ವರ್ಷ ದ ಸುನೀತಾ ವಿಲಿಯಮ್ಸ್‌ “ಮಾನವ ಬಾಹ್ಯಾಕಾಶ ಹಾರಾಟಕ್ಕೆ ದಿಕ್ಕು ತೋರಿಸಿದ ಮಹಾನ್ ನಾಯಕಿ” ಎಂದು ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್ ಶ್ಲಾಘಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿನ ಅವರ ನಾಯಕತ್ವವು ಭೂಮಿಯ ಕೆಳ ಕಕ್ಷೆಯಲ್ಲಿನ ಪರಿಶೋಧನೆ ಹಾಗೂ ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಗಳ ಭವಿಷ್ಯವನ್ನು ರೂಪಿಸಲು ಮಹತ್ವದ ಪಾತ್ರ ವಹಿಸಿದೆ ಎಂದಿದ್ದಾರೆ. ನಿಮ್ಮ ಅರ್ಹ ನಿವೃತ್ತಿಗೆ ಹಾರ್ದಿಕ ಅಭಿನಂದನೆಗಳು. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ನೀಡಿದ ನಿಮ್ಮ ಅಮೂಲ್ಯ ಸೇವೆಗೆ ಧನ್ಯವಾದಗಳು ಎಂದು ಐಸಾಕ್‌ಮನ್ ಗೌರವ ಸಲ್ಲಿಸಿದ್ದಾರೆ.

1998ರಲ್ಲಿ ನಾಸಾದಿಂದ ಗಗನಯಾತ್ರಿಯಾಗಿ ಆಯ್ಕೆಯಾದ ಸುನೀತಾ ವಿಲಿಯಮ್ಸ್, ಮೂರು ಬಾಹ್ಯಾಕಾಶ ಯಾತ್ರೆಗಳ ಮೂಲಕ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಬೋಯಿಂಗ್ ಸ್ಟಾರ್‌ಲೈನರ್ ಹಾಗೂ ಸ್ಪೇಸ್‌ಎಕ್ಸ್ ಕ್ರೂ–9 ಕಾರ್ಯಾಚರಣೆಗಳ ವೇಳೆ 286 ದಿನಗಳ ಏಕ ಬಾಹ್ಯಾಕಾಶ ಹಾರಾಟ ನಡೆಸಿರುವ ಅವರು ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಸಮಾನವಾಗಿ 286 ದಿನಗಳ ಏಕ ಬಾಹ್ಯಾಕಾಶ ಹಾರಾಟವನ್ನು ಪೂರ್ಣಗೊಳಿಸಿದ ಅಮೆರಿಕನ್ನರಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಒಂಬತ್ತು ಬಾಹ್ಯಾಕಾಶ ನಡಿಗೆಗಳಲ್ಲಿ 62 ಗಂಟೆ 6 ನಿಮಿಷಗಳನ್ನು ಅವರು ಬಾಹ್ಯಾಕಾಶದ ಹೊರಗಡೆ ಕಳೆಯುವ ಮೂಲಕ ಅತಿ ಹೆಚ್ಚು ಸಮಯ ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರು.

ಅವರ ಮೂರನೇ ಮತ್ತು ಅತ್ಯಂತ ದೀರ್ಘ ಕಾರ್ಯಾಚರಣೆ ಜೂನ್ 2024ರಲ್ಲಿ ಆರಂಭವಾಯಿತು. ನಾಸಾದ ಬೋಯಿಂಗ್ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಭಾಗವಾಗಿ, ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಉಡಾವಣೆಯಾದರು. ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರು ನಿಗದಿತ ಅವಧಿಗೆ ಮರಳಲಾಗದೆ ಮಾರ್ಚ್ 2025ರಲ್ಲಿ ಭೂಮಿಗೆ ಮರಳಿದರು. ನೌಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳ ಕಾರಣ ಮಿಷನ್ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರಿಯಿತು.

ಸುನೀತಾ ಅವರ ತಂದೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್‌ನಲ್ಲಿ ಜನಿಸಿದ ವೈದ್ಯ ದೀಪಕ್ ಪಾಂಡ್ಯ ಅಮೆರಿಕಕ್ಕೆ ವಲಸೆ ಹೋಗಿದ್ದರು. ತಾಯಿ ಸ್ಲೊವೇನಿಯನ್ ಮೂಲದ ಉರ್ಸುಲಿನ್ ಬೋನಿ. ಮೂವರು ಮಕ್ಕಳಲ್ಲಿ ಸುನೀತಾ ಕಿರಿಯವರು. ಅವರ ಪತಿ ಮೈಕೆಲ್ ನಾಸಾದ ವಿಜ್ಞಾನಿ.

ನಾವು ಹಾಕಿದ ಅಡಿಪಾಯವು ಮುಂದಿನ ದೊಡ್ಡ ಹೆಜ್ಜೆಗಳನ್ನು ಸ್ವಲ್ಪ ಸುಲಭಗೊಳಿಸಿದೆ ಎಂದು ನಾನು ನಂಬುತ್ತೇನೆ. ನಾಸಾ ಮತ್ತು ಅದರ ಪಾಲುದಾರ ಸಂಸ್ಥೆಗಳು ಮುಂದಿನ ಹಂತದ ಇತಿಹಾಸ ನಿರ್ಮಾಣದತ್ತ ಸಾಗುತ್ತಿರುವುದನ್ನು ನೋಡಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದು ಸುನೀತಾ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *