Saturday, February 14, 2026
Menu

ಬೇಸಿಗೆ: ಕರೆಂಟು-ನೀರು ಪೂರೈಕೆಗೆ ತೊಡಕಾಗದಿರಲಿ

ಬೇಸಿಗೆಯು, ಈ ಸಾರಿ ರಾಜ್ಯದಲ್ಲಿ ತುಸು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಕಂದಾಯ , ಗ್ರಾಮೀಣಾಭಿವೃದ್ಧಿ ಮತ್ತು ಇಂಧನ ಖಾತೆ ಸಚಿವಾಲಯವು ಹಿರಿಯ ಅಧಿಕಾರಿಗಳ ಜಂಟಿ ಸಭೆಯೊಂದನ್ನು ಕರೆದು ಮುಂದಿನ ಮೂರು ತಿಂಗಳ ಕ್ರಿಯಾ ಯೋಜನೆ ರೂಪಿಸುವ ಅಗತ್ಯವಿದೆ.

ರಾಜ್ಯದಲ್ಲಿ ಇನ್ನು ಬೇಸಿಗೆಯ ಪರ್ವ. ಗ್ರಾಮ ಮತ್ತು ಹೋಬಳಿಗಳಲ್ಲಿ ಕುಡಿಯುವ ನೀರು ಮತ್ತು ಕರೆಂಟ್‌ಗೆ ತೊಡಕು. ಕೆಲವು ಕಡೆ ಕರೆಂಟ್ ಇದ್ದರೆ ನೀರಿಲ್ಲ. ನೀರಿದ್ದರೆ ಕರೆಂಟ್ ಇರುವುದಿಲ್ಲ ! ಇವುಗಳ ನಡುವೆ ಸರ್ಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಅಲಭ್ಯ .

ಉತ್ತರ ಕರ್ನಾಟಕವೂ ಸೇರಿದಂತೆ ಬಹುತೇಕ ಭಾಗಗಳಲ್ಲಿ ಈ ಸಾರಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದರೂ ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಉಂಟಾಗಿರುವುದು ಗಮನಾರ್ಹ. ನೀರಿನ ಸಂಗ್ರಹಾಲಯದಿಂದ ನೀರು ಮೇಲೆತ್ತಲು ಸರಿಪ್ರಮಾಣದ ಕರೆಂಟ್ ಇರುವುದಿಲ್ಲ. ಮೋಟಾರ್ ಮತ್ತು ಜನರೇಟರ್ ಸಮಸ್ಯೆ ಇತ್ಯಾದಿಗಳಿಂದ ಸಂಪ್ ಮತ್ತು ಓವರ್‌ಹೆಡ್ ಟ್ಯಾಂಕುಗಳಿಗೆ ನೀರು ಪೂರೈಸುವ ಕಾರ್ಯದಲ್ಲಿ ಹಲವು ಹತ್ತು ಪ್ರಾತ್ಯಕ್ಷಿಕ ಸಮಸ್ಯೆಗಳು ತಲೆಯೆತ್ತಿವೆ. ಇದನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಪುರಸೊತ್ತು ಇಲ್ಲದಂತಾಗಿದೆ ! ಶಾಲಾ, ಕಾಲೇಜುಗಳ ಪರೀಕ್ಷೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಮತ್ತು ಸಿದ್ಧತೆಯ ಹಿನ್ನೆಲೆಯಲ್ಲಿ ವಸತಿ ನಿಲಯಗಳಿಗೆ ಸೂಕ್ತ ಕುಡಿಯುವ ನೀರು ಮತ್ತು ಕರೆಂಟ್ ವ್ಯವಸ್ಥೆ ಇಲ್ಲದಿದ್ದರೆ ಇದರಿಂದ ಮತ್ತಷ್ಟು ತೊಂದರೆಯಾದೀತು.

ಫೆಬ್ರವರಿಯಿಂದ ಮುಂದಿನ ಮೇ ತಿಂಗಳಿನವರೆಗೆ ನಾಡಿನ ಎಲ್ಲ ಕಡೆ ಉತ್ಸವ ,ತೇರು ಜಾತ್ರೆ ಮತ್ತು ಮದುವೆ ಮತ್ತು ಸಾರ್ವಜನಿಕ ಸಮಾರಂಭಗಳ ಭರಾಟೆ. ಇಂತಹ ಕಡೆ ಕರೆಂಟ್ ಮತ್ತು ನೀರಿನ ಸೂಕ್ತ ವ್ಯವಸ್ಥೆ ಅತಿ ಮುಖ್ಯ. ದೇವಾಲಯಗಳ ಉತ್ಸವ ಮತ್ತು ತೇರಿನ ವೇಳೆ ಸೂಕ್ತ ನೀರು ಮತ್ತು ಕರೆಂಟ್ ಪೂರೈಕೆಯಿಲ್ಲದಿದ್ದಲ್ಲಿ ಇದರಿಂದ ಕ್ರಿಮಿನಲ್ ಚಟುವಟಿಕೆಗಳಿಗೆ ಆಸ್ಪದವಾಗುತ್ತೆ . ಈ ದಿಶೆಯಲ್ಲಿ ಜಿಲ್ಲಾದಿಕಾರಿಗಳು ಮತ್ತು ಆಯಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಸಾರ್ವಜನಿಕ ಕುಡಿಯುವ ನೀರಿನ ಪೂರೈಕೆ ಮತ್ತು ವಿದ್ಯುತ್ ಪೂರೈಕೆ ಬಗ್ಗೆ ನಿಗಾಯಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುವುದು ಅಗತ್ಯ.

ವರ್ಷಗಟ್ಟಳೆ ರಿಪೇರಿ ಕಾಣದ ಕೊಳವೆ ಬಾವಿಗಳು ನಿರ್ವಹಣೆಯೇ ಇಲ್ಲದೆ ತುಕ್ಕು ಹಿಡಿದ ವಿದ್ಯುತ್ ಮೋಟಾರುಗಳು ಇವುಗಳಿಂದು ಪ್ರತಿ ಪಂಚಾಯ್ತಿ ಮಟ್ಟದಲ್ಲಿಯೂ ಕಂಡು ಬಂದಿದೆ. ಬಾಯಾರಿಕೆ ಆದಾಗ ಬಾವಿ ತೋಡುವ ಪ್ರವೃತ್ತಿ ಸರಿಯಲ್ಲ. ಈಗಿನಿಂದ ಜಿಲ್ಲಾಡಳಿತವು ಇಂತಹ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿದಲ್ಲಿ ಜಾತ್ರೆ ಮತ್ತು ಉತ್ಸವಗಳ ಸಮಯದಲ್ಲಿ ಕುಡಿಯುವ ನೀರು ಮತ್ತು ಕರೆಂಟ್ ಪೂರೈಕೆ ವಿಷಯದಲ್ಲಿ ಯಾವುದೇ ಸಮಸ್ಯೆ ತಲೆದೋರುವುದಿಲ್ಲ. ಈ ಸಾರಿ ಬೇಸಿಗೆಯು ತುಸು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಕಂದಾಯ , ಗ್ರಾಮೀಣಾಭಿವೃದ್ಧಿ ಮತ್ತು ಇಂಧನ ಖಾತೆ ಸಚಿವಾಲಯವು ಇಲಾಖೆ ಅಧಿಕಾರಿಗಳ ಜಂಟಿ ಸಭೆಯನ್ನು ಕರೆದು ಮೂರು ತಿಂಗಳ ಕ್ರಿಯಾ ಯೋಜನೆಯೊಂದನ್ನು ರೂಪಿಸುವ ತುರ್ತು ಅನಿವಾರ್ಯವಿದೆ.

 

 

 

Related Posts

Leave a Reply

Your email address will not be published. Required fields are marked *