ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮಲೆ ಮಹದೇಶ್ವರ ಬೆಟ್ಟ ಪ್ರವೇಶಿಸುವುದನ್ನು ನಿಷೇಧಿಸಿ ಹನೂರು ತಹಸೀಲ್ದಾರ್ ಚೈತ್ರಾ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆದೇಶವು ಇಂದಿನಿಂದ ಮುಂದಿನ ಆದೇಶ ಹೊರಬರುವವರೆಗೆ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಆರೋಪಿ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಮಠದಲ್ಲಿ ನಡೆಯಲಿರುವ ಪಟ್ಟದ ಮಹದೇವಸ್ವಾಮೀಜಿಯ 32ನೇ ಸಂಸ್ಮರಣೋತ್ಸವದಲ್ಲಿ ಭಾಗವಹಿಸಲು ಮುಂದಾಗಿದ್ದು, ಅವರು ಭಾಗವಹಿಸಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸುಳ್ವಾಡಿ ದುರಂತದ ಸಂತ್ರಸ್ತರು ಹಾಗೂ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ಇಮ್ಮಡಿ ಮಹದೇವಸ್ವಾಮಿಗೆ ಸಾಲೂರು ಮಠದ ಆವರಣಕ್ಕೆ ಪ್ರವೇಶ ನೀಡಬಾರದು ಎಂದು ಸಾಲೂರು ಮಠದ ಮಹದೇಶ್ವರಸ್ವಾಮಿ ಎಜುಕೇಶನ್ ಸೊಸೈಟಿಯ ಸದಸ್ಯ ಪೊನ್ನಾಚಿ ಮಹದೇವಸ್ವಾಮಿ ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆರೋಪಿಯ ಭಾಗವಹಿಸುವಿಕೆಯಿಂದ ಗಲಭೆ, ಶಾಂತಿಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು.
ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಪಾರಮ್ಯ ಸಾಧಿಸಲು 2018 ರ ಡಿ.14 ರಂದು ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ವಿಷ ಪ್ರಸಾದ ಸೇವಿಸಿದ್ದ 17 ಮಂದಿ ಮೃತಪಟ್ಟು, , 123 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಹಾದೇವಸ್ವಾಮಿ 2018 ರಿಂದಲೂ ಮೈಸೂರು ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದರು.
ಇವರಿಗೆ ಜಾಮೀನು ಮಂಜೂರು ಖಂಡಿಸಿ ಸಂತ್ರಸ್ತರು ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಕೈಯಲ್ಲಿ ಪೆಟ್ರೋಲ್ ಹಿಡಿದು ಇಮ್ಮಡಿ ಮಹಾದೇವಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದರು.


