ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಮಲಗಿದ್ದ ತಾಯಿ ಮತ್ತು ಮೂರು ವರ್ಷದ ಮಗುವಿನ ಶವ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮಗು ಧನ್ವಿ (3) ಮೃತಪಟ್ಟವರು.
ಹರೀಶ್ ಅವರು ತನ್ನ ತಾಯಿ, ಪತ್ನಿ, ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸವಿದ್ದರು. ರಾತ್ರಿ ಮನೆಯವರೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿ ಮಲಗಿದ್ದ ಮಧುಶ್ರೀ ಮತ್ತು ಮಗು ಬೆಳಗ್ಗೆ ಮಗು ಮನೆಯಲ್ಲಿ ಕಾಣಿಸಲಿಲ್ಲ, ಎಲ್ಲರೂ ಎಲ್ಲೆಡೆ ಹುಡುಕಾಡಿದರು. ಆಗ ಮನೆ ಸಮೀಪದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಧುಶ್ರೀ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾದ ಮಧುಶ್ರೀ ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ, ಮಧುಶ್ರೀ ಮಗುವನ್ನು ಸೊಂಟಕ್ಕೆ ಬಟ್ಟೆಯಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ. ಮೃತದೇಹ ಪತ್ತೆಯಾದಾಗ ಮಗು ತಾಯಿಯನ್ನು ಅಪ್ಪಿಕೊಂಡ ರೀತಿ ಪತ್ತೆಯಾಗಿದೆ.
ಮಗಳ ಸಾವಿನ ಬಗ್ಗೆ ಅನುಮಾನ ಇದೆ ಎಂದು ಮಧುಶ್ರೀ ತಾಯಿ ರತ್ನಾವತಿ ದೂರು ನೀಡಿದ್ದಾರೆ. ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆತ್ಮಹತ್ಯೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


