Menu

Suicide death- ಡಿಜಿಟಲ್‌ ಅರೆಸ್ಟ್‌ ಕಿರುಕುಳ: ಚನ್ನಪಟ್ಟಣದಲ್ಲಿ ವ್ಯಕ್ತಿ ಆತ್ಮಹತ್ಯೆ

ಸೈಬರ್‌ ವಂಚಕರು ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ಹಣ ದೋಚಿ, ಮತ್ತೆ ಹಣ ಕೊಡುವಂತೆ ಒತ್ತಾಯಿಸಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೈಬರ್ ವಂಚಕರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣು ಬಿಗಿದುಕೊಂಡಿರುವುದರಿಂದ ಹಲವು ಅನುಮಾನ ವ್ಯಕ್ತವಾಗಿದೆ.

ಬೆಸ್ಕಾಂ ಸಿಬ್ಬಂದಿ 42 ವರ್ಷದ ಕುಮಾರ್ ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಸ್ಕಾಂ ಹೊರಗುತ್ತಿಗೆ ನೌಕರರನಾಗಿ ಕುಮಾರ್ ಕೆಲಸ ಮಾಡುತ್ತಿದ್ದರು. ವಿಕ್ರಮ್ ಗೋಸ್ವಾಮಿ ಎಂಬಾತ ವೀಡಿಯೊ ಕಾಲ್ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿದ್ದ. ಕೇಸ್‌ನಿಂದ ಕೈಬಿಡಲು ಅಕೌಂಟ್‌ಗೆ ಹಣ ಹಾಕು ಎಂದು ಬೆದರಿಸಿದ್ದ. 11 ಲಕ್ಷ ರೂ. ಅಕೌಂಟ್‌ಗೆ ಹಾಕಿಸಿಕೊಂಡಿದ್ದ. ಮತ್ತೆ ಹಣ ನೀಡುವಂತೆ ಬೆದರಿಸಿದ್ದ. ಕಿರುಕುಳಕ್ಕೆ ಬೇಸತ್ತ ಕುಮಾರ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ತನ್ನ ಅನಾರೋಗ್ಯದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ವಿಕ್ರಂ ಗೋಸ್ವಾಮಿ ಎಂಬಾತ ಸಿಬಿಐ ಅಧಿಕಾರಿಯೆಂದು ನಂಬಿಸಿ ನನಗೆ 8109931663ರ ನಂಬರ್‌ನಿಂದ ಫೋನ್ ಮಾಡಿ ನಿನ್ನ ಮೇಲೆ ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ಅಕೌಂಟಿಗೆ 1,95,000 ರೂ. ಹಾಕು ಎಂದು ಅಕೌಂಟ್ ನಂಬರ್ ಕಳುಹಿಸಿದ್ದ. ನಾನು ಭಯಪಟ್ಟು ಹಣ ಹಾಕಿದೆ. ಮತ್ತೆ ಫೋನ್ ಮಾಡಿ ಆ ಅಕೌಂಟ್‌ಗೆ ಹಾಕು, ಈ ಅಕೌಂಟ್‌ಗೆ ಹಾಕು ಎಂದು ನನ್ನಿಂದ 11 ಲಕ್ಷ ಹಾಕಿಸಿಕೊಂಡಿರುತ್ತಾನೆ. ನಂತರ 9752140613 ಹಾಗೂ 9812177540ರ ನಂಬರಿಗೆ 2,75,000 ರೂ. ಕಳುಹಿಸು ಎಂದು ಪೀಡಿಸುತ್ತಿದ್ದ. ಈ ಕಾರಣಕ್ಕೆ ನನ್ನ ಸಾವನ್ನು ನಾನೇ ತಂದುಕೊಂಡಿದ್ದೇನೆ ಎಂದು ಬರೆಯಲಾಗಿದೆ.

ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡೆತ್‌ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಸದ್ಯ ಈ ಪ್ರಕರಣ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ.

Related Posts

Leave a Reply

Your email address will not be published. Required fields are marked *