ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಕಬ್ಬು ಬೆಳೆಗಾರರ ಬೇಡಿಕೆಗೆ ಕೊನೆಗೂ ಮಣಿದ ರಾಜ್ಯ ಸರ್ಕಾರ ಕಬ್ಬು ಪ್ರತಿ ಟನ್ ಗೆ 3,300 ರೂ. ನಿಗದಿ ಮಾಡಿದೆ.
ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸಿದ ನಂತರ ಕಬ್ಬು ಪ್ರತಿ ಟನ್ ಗೆ 3,300 ರೂ. ನಿಗದಿಪಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,200 ರೂ. ನಿಗದಿಪಡಿಸಲಾಗಿತ್ತು. ಆದರೆ ಕಬ್ಬು ಬೆಳೆಗಾರರು 3,500 ರೂ.ಗೆ ಪಟ್ಟು ಹಿಡಿದಿದ್ದು, ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸಿದ ನಂತರ ರಾಜ್ಯ ಸರಕಾರ ಕಬ್ಬು ಪ್ರತಿ ಟನ್ ಗೆ 3,300ರೂ. ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ 50 ರೂ. ಹಾಗೂ ಕಾರ್ಖಾನೆಗಳಿಂದ 50 ರೂ. ಹೆಚ್ಚುವರಿ ಮೊತ್ತವನ್ನು ನೀಡಲು ಸಮ್ಮತಿಸಲಾಯಿತು.
ಕಾರ್ಖಾನೆ ಮಾಲೀಕರ ವಿರುದ್ಧ ಸಿದ್ದು ಗರಂ
ಕಬ್ಬು ಬೆಳಗಾರರ ಸಮಸ್ಯೆ ಬಗೆಹರಿಸಲು ಟನ್ ಗೆ ಹೆಚ್ಚುವರಿ 50 ರೂ. ನೀಡಲು ಕಾರ್ಖಾನೆ ಮಾಲೀಕರು ನಿರಾಕರಿಸಿದರು.
ಸಕ್ಕರೆ ಕಾರ್ಖಾನೆ ನಡೆಸುವುದೇ ಕಷ್ಟವಾಗಿದೆ. ನಾವು ನಷ್ಟದಲ್ಲಿ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ನಷ್ಟದಲ್ಲಿ ನಡೆಯಬೇಕು ಎಂದಾದರೆ ಸರ್ಕಾರವೇ ಸರ್ಕಾರೆ ಕಾರ್ಖಾನೆ ವಹಿಸಿಕೊಳ್ಳಲಿ ಎಂದು ಪಟ್ಟು ಹಿಡಿದರು.
ಎಥೆನಾಲ್ ಬಳಕೆಗೆ ಕೇಂದ್ರದಿಂದ ಶೇ.6ರಷ್ಟು ಸಬ್ಸಿಡಿ ಬರುತ್ತದೆ. ಕೇಂದ್ರದಿಂದ ಹಣ ಬಂದಿಲ್ಲ ಅಂದರೆ ಕೇಳಬೇಕು. ಈ ಬಗ್ಗೆ ಕಾರ್ಖಾನೆ ಮಾಲೀಕರೇ ಆಗಲಿ, ಬಿಜೆಪಿ ಸಂಸದರಾಗಲಿ ಚಕಾರ ಎತ್ತುತ್ತಿಲ್ಲ ಎಂದರು.
ಸರ್ಕಾರದ ಬೆಂಬಲ ನಿಮಗೆ ಬೇಡವಾ? ಹೆಚ್ಚುವರಿ 100 ರೂ.ನಲ್ಲಿ ಸರ್ಕಾರ 50 ರೂ. ಕೊಡುತ್ತದೆ. ನೀವು 50 ರೂ. ಕೊಡಲು ಆಗುವುದಿಲ್ಲವೇ? ನಿಮ್ಮ ನಿಲುವು ಸರಿಯಿಲ್ಲ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಾಗ ಕಾರ್ಖಾನೆ ಮಾಲೀಕರು ಸಮ್ಮತಿಸಿದರು ಎಂದು ಮೂಲಗಳು ಹೇಳಿವೆ.


