ಬಾಗಲಕೋಟೆ: ಕಬ್ಬಿಗೆ 3500 ರೂ.ದರ ನಿಗದಿ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಬಾಗಲಕೋಟೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಗುರುವಾರ ಹಿಂಸಾರೂಪ ಪಡೆದಿದ್ದು, 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರ್ಯಾಲಿಗಳು ಬೆಂಕಿಗೆ ಆಹುತಿಯಾಗಿವೆ.
ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಬ್ಬಿಗೆ 3,300 ರೂ. ದರ ನಿಗದಿ ಮಾಡಲಾಗಿತ್ತು. ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಪ್ರತಿಭಟನೆ ವಾಪಸ್ ಪಡೆದರೂ ಮುಧೋಳದಲ್ಲಿ ರೈತರು ಕನಿಷ್ಠ 3500 ರೂ. ಬೆಂಬಲ ಬೆಲೆಗೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದರು.
ಸಮೀರವಾಡಿಯ ಗೋದಾವರಿ ಕಾರ್ಖಾನೆ ಆವರಣದಲ್ಲಿ ಗುರುವಾರ ಸಂಜೆಯವರೆಗೂ ಶಾಂತಿಯುತವಾಗಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಟ್ರ್ಯಾಕ್ಟರ್, ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳು ಅಲ್ಲದೇ ಸಾವಿರಾರು ಟನ್ ಕಬ್ಬು ತುಂಬಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರ್ಯಾಲಿಗಳಿಗೆ ಬೆಂಕಿ ಹೊತ್ತಿಕೊಂಡು ಅಪಾರ ನಷ್ಟವುಂಟಾಗಿದೆ. ಇದರಿಂದ ಉತ್ತಮ ಫಸಲು ಪಡೆದಿದ್ದ ರೈತರು ಕಬ್ಬು ಬೆಂಕಿಗೆ ಆಹುತಿ ಆಗಿದ್ದರಿಂದ ಕಣ್ಣೀರು ಹಾಕಿದ್ದಾರೆ.
ರೈತರು ಹಾಗೂ ಕಾರ್ಖಾನೆಗಳ ನಡುವೆ ದರ ನಿಗದಿ ಬಗ್ಗೆ ಹೊಂದಾಣಿಕೆ ಆಗಿರಲಿಲ್ಲ. ಅಲ್ಲದೇ ಸರ್ಕಾರ ಕೂಡ ಮಾತುಕತೆಗೆ ಆಹ್ವಾನಿಸಿಲ್ಲ ಎಂದು ಪ್ರತಿಭಟನಾ ನಿರತ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.


