Wednesday, January 07, 2026
Menu

ಡಬಲ್ ಪೋಸ್ಟ್ ಮಾರ್ಟಂ ಬಗ್ಗೆ ಬಿಮ್ಸ್ ಅಧಿಕ್ಷಕರನ್ನು ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಿ: ಪರಮೇಶ್ವರ್ ಗೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

hd kumaraswamy

ಬೆಂಗಳೂರು: ಬಳ್ಳಾರಿ ಯುವಕನ ಮೃತದೇಹವನ್ನು ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಿರುವ ಬಗ್ಗೆ ಅಲ್ಲಿನ ಬಿಮ್ಸ್ ಅಧಿಕ್ಷಕರನ್ನು ತಕ್ಷಣವೇ ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಬಳ್ಳಾರಿಯಲ್ಲಿ ಗನ್ ಮ್ಯಾನ್ ಹಾರಿಸಿದ ಗುಂಡಿಗೆ ಬಲಿಯಾದ ಯುವಕನ ಮೃತದೇಹವನ್ನು ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಲಾಗಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.

ತಮ್ಮ ಹೇಳಿಕೆಯ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು ನೀಡಿದ್ದ ಪ್ರತಿಕ್ರಿಯೆ ಬಗ್ಗೆ ಖಾರವಾಗಿ ತಿರುಗೇಟು ನೀಡಿರುವ ಕೇಂದ್ರ ಸಚಿವರು; ಗೃಹ ಸಚಿವ ಪರಮೇಶ್ವರ ಅವರೇ, ಬಳ್ಳಾರಿಯಲ್ಲಿ ಕಗ್ಗೊಲೆಯಾದ ನಿಮ್ಮದೇ ಪಕ್ಷದ ನತದೃಷ್ಟ ಕಾರ್ಯಕರ್ತನ ಡಬಲ್ ಪೋಸ್ಟ್ ಮಾರ್ಟಂ ಕಥಾನಕದ ಬಗ್ಗೆ ನಾನು ಹೇಳಿದ್ದು ಸತ್ಯ. ಸತ್ತ ಶರೀರವನ್ನೂ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುವ ನಿಮ್ಮ ಕೀಳು ನಡವಳಿಕೆ ಕುರಿತು ನಾನು ಹೇಳಿದ್ದು ಅಕ್ಷರಶಃ ನಿಜ ಎಂದಿದ್ದಾರೆ.

ಡಬಲ್ ಪೋಸ್ಟ್ ಮಾರ್ಟಂ ಅಸತ್ಯವಾದರೆ ಬಿಮ್ಸ್ ಅಧಿಕ್ಷಕರನ್ನು ತಕ್ಷಣವೇ ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಿ. ಆಗ ನಿಮ್ಮ ಪೋಸ್ಟ್ ಮಾರ್ಟಂ ಮಾಯಾಜಾಲ ಬಯಲಾಗುತ್ತದೆ. ಮಾಡಿಸುತ್ತೀರಾ ಮಾನ್ಯ ಮಂತ್ರಿಗಳೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಈ ಪ್ರಕರಣ ಮುಚ್ಚಿಹಾಕಲು ನಿಮ್ಮ ಸರಕಾರ ನಡೆಸುತ್ತಿರುವ ಮಹಾನ್ ಹರಸಾಹಸ ಏನೇನ್ ಎಂಬುದು ನನಗೆ ಗೊತ್ತಿದೆ. ಹಾಗೆಯೇ, ಬಿಮ್ಸ್ ಅಧಿಕ್ಷಕರ ಹೇಳಿಕೆಯನ್ನೂ ಗಮನಿಸಿದ್ದೇನೆ. ಅವರ ಪ್ರಕಾರ 6 ಗಂಟೆಯಿಂದ ಶುರುವಾದ ಪೋಸ್ಟ್ ಮಾರ್ಟಂ 3 ಗಂಟೆಗಳ ಕಾಲ ನಡೆದು ವಿಳಂಬವಾಯಿತು. ದೇಹದಲ್ಲಿ ಅನೇಕ ಚೂರುಗಳು ಇದ್ದವು ಎಂದು ಹೇಳಿದ್ದಾರೆ, ಸರಿ. ಆದರೆ, ಆ ವೈದ್ಯರೇ ಮರಣೋತ್ತರ ಪರೀಕ್ಷೆ ಮುಗಿಸಬಹುದಿತ್ತು. ಹಾಗಿದ್ದ ಮೇಲೆ ಇನ್ನೊಬ್ಬ ವೈದ್ಯರನ್ನು ಕರೆಸಿಕೊಂಡ ಗುಟ್ಟೇನು? ಮೃತದೇಹ ಪರೀಕ್ಷೆಗೆ ಎಷ್ಟು ವೈದ್ಯರು ಬೇಕು? ಮರಣೋತ್ತರ ಪರೀಕ್ಷೆ ವೇಳೆ ನೀವು ಜೀವ ಉಳಿಸಬೇಕಿತ್ತ? ಅಥವಾ ಸತ್ಯ ಹುಡುಕಬೇಕಿತ್ತಾ? ಆಗ ನೀವು ಕರೆಸಬೇಕಿದ್ದದ್ದು ಪೊರೆನ್ಸಿಕ್ ತಜ್ಞರನ್ನು ಎಂದು ಗೃಹ ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಪೋಸ್ಟ್ ಮಾರ್ಟಂ ವೇಳೆ ಆ ಇಬ್ಬರು ವೈದ್ಯರ ನಡುವೆ ಏನೆಲ್ಲಾ ತಿಕ್ಕಾಟ ನಡೆಯಿತು? ಎನ್ನುವುದು ಕೂಡ ನನಗೆ ಗೊತ್ತಿದೆ. ಬಿಮ್ಸ್ ಅಧಿಕ್ಷಕರ ಹೇಳಿಕೆಯಲ್ಲೇ ನಿಮಗೆ ಪ್ರಶ್ನೆಯೂ ಅಡಗಿದೆ, ಉತ್ತರವೂ ಇದೆ. ಮೊದಲ ವೈದ್ಯರೇ ಮರಣೋತ್ತರ ಪರೀಕ್ಷೆ ಮುಗಿಸಬಹುದಿತ್ತು. ಇನ್ನೊಬ್ಬ ವೈದ್ಯರ ಅವಶ್ಯಕತೆ ಏನಿತ್ತು? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.

ಸಮಾಜವನ್ನು ಹಾಳು ಮಾಡಲಿಕ್ಕೊ ಅಥವಾ ನಿಮ್ಮ ತನಿಖೆ ದಿಕ್ಕು ತಪ್ಪಿಸಲಿಕ್ಕೊ, ಮಾಹಿತಿ ಇಲ್ಲದೆಯೋ ನಾನು ಹೇಳಿದ್ದಲ್ಲ. ಮೃತದೇಹವನ್ನೂ ನಿಮ್ಮ ಮನೆಹಾಳು ರಾಜಕೀಯಕ್ಕೆ ಬಳಸಿಕೊಂಡಿದ್ದನ್ನು ರಾಜ್ಯದ ಜನತೆಗೆ ಗಮನಕ್ಕೆ ತಂದಿದ್ದೇನೆ, ಪ್ರಶ್ನಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *