ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಶಾಲೆಯಲ್ಲಿ ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸಿ 70 ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಶಾಲೆ ಬಿಡಿಸುವುದಾಗಿ ಹೆಚ್ಚಿನ ಪೋಷಕರು ಈ ಹಿಂದೆಯೇ ತಿಳಿಸಿದ್ದರು. ಕೆಲವು ಪೋಷಕರು ಮೊಟ್ಟೆ ನೀಡುವಂತೆ ಆಗ್ರಹಿಸಿದ್ದರು. ಅಧಿಕಾರಿಗಳು ನಿಯಮದಂತೆ ಮೊಟ್ಟೆ ವಿತರಣೆ ಆರಂಭಿಸಿದ್ದರು.
ಶಾಲೆಯಲ್ಲಿ 124 ಮಕ್ಕಳು ಓದುತ್ತಿದ್ದು70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಬೆಲೆ ಸಿಗದ ಜಾಗದಲ್ಲಿ ಓದುವುದು ಬೇಡ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಶಾಲೆ ಬಳಿ ವೀರಭದ್ರೇಶ್ವರ ಸ್ವಾಮಿ ದೇಗುಲ ಇರುವುದರಿಂದ ಮೊಟ್ಟೆ ವಿತರಣೆ ಮಾಡಬಾರದು ಎಂದು ಕೆಲವು ಮಂದಿ ಪೋಷಕರು ಆಗ್ರಹಿಸಿದ್ದರು. ಈ ಕಾರಣಕ್ಕೆ ಶಾಲೆಯಲ್ಲಿ ಕೂಡ ಮೊಟ್ಟೆ ವಿತರಿಸದಿರಲು ಎಸ್ಡಿಎಂಸಿ ನಿರ್ಧರಿಸಿತ್ತು. ಬಾಳೆಹಣ್ಣು ಅಥವಾ ಮಿಠಾಯಿ ವಿತರಣೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಮತ್ತೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದ್ದು ಹೆಚ್ಚಿನ ಪೋಷಕರ ವಿರೋಧ ವ್ಯಕ್ತವಾಗಿತ್ತು. ಮೊಟ್ಟೆ ತಿನ್ನುವ ಬಗ್ಗೆ ತಕರಾರಿಲ್ಲ. ಆದರೆ ಈ ಪ್ರದೇಶದಲ್ಲಿ ದೇಗುಲ ಇರುವುದರಿಂದ ಬೇಡ. ಮೊಟ್ಟೆ ಬೇಕು ಎನ್ನುವ ಮಕ್ಕಳ ಮನೆಗೇ ಅದನ್ನು ತಲುಪಿಸಿಬಿಡಿ. ದೇಗುಲದ ಆವರಣವಾಗಿರುವುದರಿಂದ ಶಾಲೆಯಲ್ಲಿ ಮೊಟ್ಟೆ ಬೇಯಿಸುವುದು ಬೇಡ. ನಮ್ಮ ಧಾರ್ಮಿಕ ಭಾವನೆಗೆ ಬೆಲೆ ನೀಡಬೇಕು. ಇಲ್ಲವಾದಲ್ಲಿ ಟಿಸಿ ಕೊಟ್ಟುಬಿಡಿ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಹೆಚ್ಚಿನ ಮಕ್ಕಳ ಪೋಷಕರು ಈ ಮೊದಲೇ ಹೇಳಿದ್ದರು.
ಕೆಲವು ಪೋಷಕರು ಮೊಟ್ಟೆ ನೀಡಲೇಬೇಕು ಎಂದು ಹಠ ಹಿಡಿದಿದ್ದರಿಂದಮೊಟ್ಟೆ ವಿತರಣೆ ಆರಂಭಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲೆ ತೊರೆದಿದ್ದಾರೆ.