ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಸರ್ಕಾರಿ ವಸತಿ ಶಾಲೆಯ ಶೌಚಾಲಯದಲ್ಲೇ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ವ್ಯವಸ್ಥೆಗೆ ಸಂಬಂಧಿಸಿದಂತೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ವಿಷಯ ತಿಳಿದು ಆತಂಕಗೊಂಡ ಮಕ್ಕಳ ಪೋಷಕರು ವಸತಿ ಶಾಲೆಯ ಬಳಿ ಸೇರಿದ್ದಾರೆ.
ವಿದ್ಯಾರ್ಥಿನಿ ಗರ್ಭಿಣಿ ಎನ್ನುವ ವಿಚಾರವನ್ನು ಹಾಸ್ಟೆಲ್ ಆಡಳಿತ ಮಂಡಳಿ ಮುಚ್ಚಿಟ್ಟಿತೇ, ವಿದ್ಯಾರ್ಥಿನಿ ಹೆರಿಗೆ ಆಗುವವರೆಗೂ ವಾರ್ಡನ್, ಸಿಬ್ಬಂದಿಗೆ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆಗಳು ವ್ಯಕ್ತವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಪ್ರಕರಣ ಸಂಬಂಧ ಮಕ್ಕಳ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ ಎಂದು ಸದಸ್ಯ ಶಶಿಧರ್ ಕೋಸುಂಬೆ ಹೇಳಿದ್ದಾರೆ.
ಈ ತರಹದ ದುರ್ಘಟನೆಗಳು ಪದೇ ಪದೆ ವರದಿಯಾಗುತ್ತಿರುವುದು ಬೇಸರ ತಂದಿದೆ, ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ವಿದ್ಯಾರ್ಥಿನಿಯ
ದೈಹಿಕ ಬದಲಾವಣೆ ಸಂದರ್ಭದಲ್ಲಿ ಅಧಿಕಾರಿಗಳು ಗಮನಹರಿಸಬೇಕಿತ್ತು, ತಿಂಗಳಲ್ಲಿ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಬೇಕಿತ್ತು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಎಡವಿದ್ದಾರೆ, ವೈದ್ಯಕೀಯ ತಪಾಸಣೆ ಮಾಡದೆ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಮತ್ತೆ ಇಂತಹ ಘಟನೆ ನಡೆಯದಂತೆ ವಸತಿ ಶಾಲೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಬೇಕೆಂದು ಆಯೋಗ ಎಚ್ಚರಿಕೆ ನೀಡಿದೆ.