ರಷ್ಯಾದಲ್ಲಿ ಭಾನುವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಏಳುವ ಅಪಾಯ ಎದುರಾಗಿದೆ ಎಂದು ರಷ್ಯಾದ ತುರ್ತು ಸೇವೆಗಳ ಸಚಿವಾಲಯ ತಿಳಿಸಿದೆ. ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವು ದಿನಗಳ ಅಂತರದಲ್ಲೇ ಇಂದು ಭೂಕಂಪ ಸಂಭವಿಸಿದೆ. ಕಮ್ಚಟ್ಕಾದ ಮೂರು ಪ್ರದೇಶಗಳಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ತುರ್ತು ಸೇವೆಗಳ ಸಚಿವಾಲಯ ಮಾಹಿತಿ ನೀಡಿದೆ.
ಸುನಾಮಿ ಸಾಧ್ಯತೆ ಹಿನ್ನೆಲೆಯಲ್ಲಿ ತೀರ ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ಜುಲೈ 30 ರಂದು ಮೊದಲ ಬಾರಿಗೆ, ಈ ಪ್ರದೇಶದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು, ನಂತರ ಹಲವು ದೊಡ್ಡ ಕಂಪನಗಳು ಸಂಭವಿಸಿದ್ದವು. ಮುಂದಿನ ಹಲವು ವಾರಗಳಲ್ಲಿ ಈ ಪ್ರದೇಶದಲ್ಲಿ ಬಲವಾದ ಭೂಕಂಪನಗಳು ಸಂಭವಿಸಬಹುದು ಎಂದು ರಷ್ಯಾದ ವಿಜ್ಞಾನಿಗಳು ಎಚ್ಚರಿಸಿದ್ದರು.
ಕಮ್ಚಟ್ಕಾದಲ್ಲಿನ ಕ್ರಷೆನಿನ್ನಿಕೋವ್ ಜ್ವಾಲಾಮುಖಿ 600 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ ಎಂದು ರಷ್ಯಾದ ವಿಜ್ಞಾನಿಗಳು ವರದಿ ಮಾಡಿದ್ದಾರೆ. ಇದು ವಾಯು ಸಂಚಾರಕ್ಕೆ ಹೆಚ್ಚಿನ ಅಪಾಯವನ್ನು ಒಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ.