Menu

ಯೂಟ್ಯೂಬ್ ಚಾನಲ್​ಗಳ ಪ್ರತಿನಿಧಿಗಳ ಮೇಲೆ ಹಲ್ಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬ್ ಚಾನಲ್​ಗಳ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವವರು ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಲಾಲ್​​ಬಾಗ್​ ಗಾಜಿನ ಮನೆಯಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ವಿಷಯವಸ್ತು ಆಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದವರ ವಿರುದ್ಧ ಅಪರಿಚಿತರಿಂದ ಹಲ್ಲೆಯಾಗಿದ್ದು, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿ ಪಕ್ಷ ಮತಗಳ್ಳತನ ಮಾಡಿದ್ದು, ಈ ಸಂಬಂಧ ಶುಕ್ರವಾರ ಪ್ರತಿಭಟನೆ ನಡೆಸಲಾಗುವುದು. ಮತಗಳ್ಳತನ ಖಂಡಿಸಿ ಪ್ರತಿಭಟಿಸಲು ನಿರ್ಧರಿಸುವುದಾಗಿ ಇದೇ ವೇಳೆ ತಿಳಿಸಿದ ಸಿಎಂ, ಇಂಡಿಯಾ ಕೂಟದಲ್ಲಿ ನಾನು ಸದಸ್ಯನಲ್ಲ. ಆದರೂ ನನ್ನನ್ನು ರಾಹುಲ್ ಗಾಂಧಿ ಊಟಕ್ಕಾಗಿ ಅಹ್ವಾನಿಸಿದ್ದಾರೆ. ಹೀಗಾಗಿ ದೆಹಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದರು.

ಹೋರಾಟಗಾರರ ನೆನೆಯಬೇಕು:

ಬ್ರಿಟೀಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ನೆನೆಸಿಕೊಂಡು ಸ್ಮರಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ , ಬ್ರಿಟೀಷರ ವಿರುದ್ಧ ಯುದ್ಧ ಪ್ರಾರಂಭಿಸಿ 200 ವರ್ಷಗಳ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಮುಂದಾಗಿದ್ದ ದಿಟ್ಟ ಹೋರಾಟ ನಡೆಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದೆ.

ಕಿತ್ತೂರು ಚೆನ್ನಮ್ಮ ಬ್ರಿಟೀಷರ ವಿರುದ್ದ ನಡೆದಂತಹ ಮೊದಲ ಯುದ್ದದಲ್ಲಿ ಗೆದ್ದರೂ, ಎರಡನೇ ಬಾರಿ ಸೋತ್ತಿದ್ದರು. ಕಿತ್ತೂರು ಸೈನ್ಯದಲ್ಲಿ ವಿರಾವೇಶದಿಂದ ಹೋರಾಟ ಮಾಡುತ್ತಿದ್ದ ಚೆನ್ನಮ್ಮನ ಬಲಗೈ ಬಂಟನಂತಿದ್ದ ಸಂಗೊಳ್ಳಿ ರಾಯಣ್ಣ ಅವರನ್ನು ಬ್ರಿಟೀಷರು ಗಲ್ಲಿಗೇರಿಸಿದ್ದರು. ರಾಯಣ್ಣ ಆಗಸ್ಟ್ 15 ರಂದು ಜನಿಸಿದ್ದರೆ, ಜನವರಿ 26ರಂದು ಸಾವನ್ನಪ್ಪಿದ್ದರು. ಇದೀಗ ಈ ಎರಡೂ ದಿನಗಳು ನಮಗೆ ವಿಶೇಷವಾಗಿವೆ ಎಂದು ಅವರು ಹೇಳಿದರು.

ಕಿತ್ತೂರು ಸಂಸ್ಥಾನದಲ್ಲಿ ಹೆಚ್ಚು ಪ್ರಮಾಣದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದವರು ಇದ್ದರು. ಎಲ್ಲ ಜಾತಿಯವರಿಗೂ ಸಮಾನವಾದ ಅವಕಾಶ ಕಲ್ಪಿಸಲಾಗಿತ್ತು. ಜಾತ್ಯತೀತವಾಗಿ ಎಲ್ಲಾ ವರ್ಗದವರ ಆಡಳಿತದಲ್ಲಿ ಬಳಸಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರದಿಂದ ವೀರ ಮಹಿಳೆಯಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಆಚರಣೆ ಪ್ರಾರಂಭಿಸಲಾಗಿತ್ತು. ಸಂಗೊಳ್ಳಿ ರಾಯಣ್ಣನ ಪ್ರಾಧಿಕಾರ ರಚನೆ ಮಾಡಿ ನಂದಘಟ್ಟದಲ್ಲಿ 110 ಎಕರೆ ಪ್ರದೇಶ ಮತ್ತು ಸಂಗೊಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಡಾ.ಎಂ.ಸಿ ಸುಧಾಕರ್, ಎಸ್.ಎಸ್.ಮಲ್ಲಿಕಾರ್ಜುನ್, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮಿಗಳು, ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತಿತರು ಹಾಜರಿದ್ದರು.

Related Posts

Leave a Reply

Your email address will not be published. Required fields are marked *