Menu

ಕಾರವಾರದಲ್ಲಿ ವಿಚಿತ್ರ ಘಟನೆ: ಹಾರಿ ಬಂದು ಚುಚ್ಚಿದ ಮೀನಿಗೆ ಮೀನುಗಾರ ಬಲಿ

ಅತ್ಯಂತ ಅಪರೂಪದಲ್ಲೇ ಅಪರೂಪದ ಘಟನೆಯಲ್ಲಿ ಮೀನೊಂದು ಹಾರಿ ಬಂದು ಚುಚ್ಚಿದ ಪರಿಣಾಮ ಯುವ ಮೀನುಗಾರ  ಮೃತಪಟ್ಟ ವಿಚಿತ್ರ ಘಟನೆ ಕಾರವಾರದಲ್ಲಿ ಸಂಭವಿಸಿದೆ.

ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗದ ಅಕ್ಷಯ ಅನಿಲ ಮಾಜಾಳಿಕರ್ (24) ಮೃತಪಟ್ಟಿದ್ದಾರೆ.

ಅಕ್ಷಯ ಮಂಗಳವಾರ ಎಂದಿನಂತೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿನಿಂದ ಸುಮಾರು 8 ರಿಂದ 10 ಇಂಚು ಉದ್ದದ ಮೀನೊಂದು ಅನಿರೀಕ್ಷಿತವಾಗಿ ದೋಣಿಯೊಳಗೆ ಹಾರಿ ಬಂದು ನೇರವಾಗಿ ಅಕ್ಷಯನ ಹೊಟ್ಟೆಗೆ ಚುಚ್ಚಿದೆ. ಮೀನು ಚುಚ್ಚಿದ್ದರಿಂಧ ಗಂಭೀರ ಗಾಯಗೊಂಡ ಆತನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಗಾಯದ ಭಾಗಕ್ಕೆ ಹೊಲಿಗೆ ಹಾಕಿ, ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆ ಆಗದ ಕಾರಣ ಬುಧವಾರ ಅಕ್ಷಯ ಮರಳಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಅಕ್ಷಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ ಮೀನಿನ ಮೂತಿಯಿಂದ ಚುಚ್ಚಿದ ಪರಿಣಾಮ ಅಕ್ಷಯನ ಕರುಳಿಗೆ ಗಂಭೀರ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.

ವೈದ್ಯರ ವಿರುದ್ಧ ಆಕ್ರೋಶ:

ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮೀನುಗಾರರು ಮತ್ತು ಕುಟುಂಬ ಸದಸ್ಯರು ಕ್ರಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿ ವೈದ್ಯರ ನಿರ್ಲಕ್ಷ್ಯದಿಂದಲೇ ಅಕ್ಷಯ ಸಾವನ್ನಪ್ಪಿದ್ದಾನೆ. ಕೇವಲ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು. ಸಿಟಿ ಸ್ಕ್ಯಾನ್ ಮಾಡಿ ಮೀನಿನ ಮುಳ್ಳು ಕರುಳಿಗೆ ತಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದರೆ ನನ್ನ ಮಗ ಬದುಕುತ್ತಿದ್ದ”. ಎಂದು ಮೃತ ಯುವಕನ ತಂದೆ ಅನಿಲ್ ಮಾಜಾಳಿಕರ್ ಅವರು ಆರೋಪಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದಿರುವುದಕ್ಕೆ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.

ಅತಿ ವಿರಳ ಪ್ರಕರಣ:

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವೈದ್ಯರು, “ಇದು ವಿಶ್ವದಲ್ಲಿಯೇ ವರದಿಯಾಗಿರುವ ಇಂತಹ ನಾಲ್ಕನೇ ಪ್ರಕರಣವಾಗಿದೆ. ತಮ್ಮ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ

Related Posts

Leave a Reply

Your email address will not be published. Required fields are marked *